Advertisement

“ಯಾಂತ್ರೀಕೃತ ನಾಟಿ ಪದ್ಧತಿಯಿಂದ ಹೆಚ್ಚಿನ ಇಳುವರಿ’

07:35 AM Aug 11, 2017 | Team Udayavani |

ಮಡಿಕೇರಿ: ಭತ್ತ ಬೆಳೆಯಲ್ಲಿ ಯಾಂತ್ರೀ ಕೃತ ನಾಟಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯುವಂತಾಗಬೇಕು ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್‌ ಅವರು ಕರೆ ನೀಡಿದ್ದಾರೆ.  

Advertisement

ಜಿಲ್ಲಾ ಪಂಚಾಯತ್‌, ಕೃಷಿ ಇಲಾಖೆ ವತಿಯಿಂದ ಭೂಚೇತನ ಯೋಜನೆಯಡಿ ಕಗ್ಗೊàಡ್ಲುವಿನ ಪ್ರಗತಿಪರ ರೈತ ಪೊಡನೋಳಂಡ ಕೆ. ಬೋಪಣ್ಣ ಮತ್ತು ಕೋದಂಡ ಬಿ. ದೇವಯ್ಯ ಅವರ ಭತ್ತದ ಗದ್ದೆಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಭತ್ತ ಬೆಳೆಯಲ್ಲಿ ಯಾಂತ್ರೀಕೃತ ನಾಟಿ ಪದ್ಧತಿಯ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು. 
 
ಜಿಲ್ಲೆಯಲ್ಲಿ ಶೇ. 40ಕ್ಕೂ ಹೆಚ್ಚು ಗದ್ದೆ ಭೂಮಿ ನಾನಾ ಕಾರಣಗಳಿಂದ ಪಾಳು ಬಿದ್ದಿದ್ದು, ಈ ಪ್ರದೇಶಗಳಲ್ಲಿ ಯಾಂತ್ರೀಕೃತ ನಾಟಿ ಪದ್ಧತಿ ಮೂಲಕ ಭತ್ತ ಕೃಷಿ ಮಾಡಿ, ಹೆಚ್ಚಿನ ಇಳುವರಿ ಪಡೆಯುವುದರ ಜೊತೆಗೆ ಕಾರ್ಮಿಕರ ಕೊರತೆ ನೀಗಿಸುವತ್ತ ರೈತರು ಮುಂದಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ಲಾಭವಿಲ್ಲವೆಂದು ಯುವಜನರು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವುದು ಹೆಚ್ಚಾಗಿದೆ. ಇದರಿಂದ ಕೃಷಿ ಬೆಳೆ ಉತ್ಪಾದನೆ ಕುಂಠಿತವಾಗಿ, ಆಹಾರದ  ಕೊರತೆ ಉಂಟಾಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ.  ಆದ್ದರಿಂದ ಭತ್ತದ ಭೂಮಿ ಪಾಳು ಬಿಡದೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಲಾಭದಾಯಕ ಕೃಷಿಯತ್ತ ಹೆಜ್ಜೆ ಹಾಕಬೇಕಿದೆ ಎಂದು ಬಿ.ಎ. ಹರೀಶ್‌ ಅಭಿಪ್ರಾಯಪಟ್ಟರು.  
 
ತಾ.ಪಂ.ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್‌ ಮಾತನಾಡಿ, ಇಂದಿನ ಯುವಜನರು ಕೃಷಿಯಿಂದ ವಿಮುಖರಾಗುತ್ತಿರುವುದರಿಂದ ಆಹಾರದ ಉತ್ಪಾದನೆಗಿಂತ, ಉಪಯೋಗಿಸು ವುದು ಹೆಚ್ಚಾಗಿದೆ. ಆದ್ದರಿಂದ ಉತ್ಪಾದನೆಯತ್ತ ಹೆಚ್ಚು ಗಮನ ಹರಿಸಬೇಕಿದೆ ಎಂದರು. 
 
ಕೃಷಿ ಕ್ಷೇತ್ರದಲ್ಲಿ ಲಾಭ ಕಂಡುಕೊಳ್ಳಲು ಕೃಷಿ ಯಾಂತ್ರೀಕರಣ ಬಳಸಿಕೊಳ್ಳುವಂತಾಗಬೇಕು, ಕೃಷಿ ಯಾಂತ್ರೀಕರಣಕ್ಕಾಗಿ ಸರ್ಕಾರ ಸಹಾಯ ಧನದಡಿ ಸೌಲಭ್ಯ ನೀಡಲಿದ್ದು, ಇದನ್ನು ಪಡೆದು ಕೊಳ್ಳುವಂತಾಗಬೇಕು ಎಂದು ಅವರು ಸಲಹೆ ನೀಡಿದರು.   
 
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್‌ ಮಾತನಾಡಿ, ಭತ್ತ ಬೆಳೆಯಲ್ಲಿ ಯಾಂತ್ರೀಕರಣ ನಾಟಿ ಪದ್ಧತಿ ಅಳವಡಿಸಿ ಕೊಳ್ಳುವುದರಿಂದ ಸಮತೋಲನವಾಗಿ ಭತ್ತ ಬೆಳೆಯಬಹುದಾಗಿದೆ. ಕಾರ್ಮಿಕ ಕೊರತೆಯನ್ನು ನೀಗಿಸಬಹುದಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದಾಗಿದೆ ಎಂದು ಹೇಳಿದರು. 

ಮಡಿಕೇರಿ ತಾಲೂಕು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ಸಿ. ಗಿರೀಶ್‌ ಮಾತನಾಡಿ ಹೊಸ ತಾಂತ್ರಿಕತೆ ಬಳಸಿ ಯಂತ್ರದ ಮೂಲಕ ನಾಟಿ ಮಾಡುವುದು ಅತ್ಯಗತ್ಯವಾಗಿದೆ. ಇದರಿಂದ ಕೃಷಿ ಕಾರ್ಮಿಕರ ಸಂಖ್ಯೆ ಮತ್ತು ಅಗತ್ಯತೆಗಳನ್ನು ಕಡಿಮೆ ಮಾಡಬಹುದಾಗಿದೆ. ಸಮಯಕ್ಕೆ ಸರಿಯಾಗಿ ಆಳ ಮತ್ತು ಅಂತರದಲ್ಲಿ ನಾಟಿ ಮಾಡಬಹುದು. ಪ್ರತೀ ಚದರ ಮೀಟರ್‌ ಪ್ರದೇಶದಲ್ಲಿ ಸೂಕ್ತ ಸಸ್ಯ ಸಂಖ್ಯೆಗಳನ್ನು ಕಾಪಾಡ ಬಹುದು. ನಾಟಿ ಮಾಡಲು ಬೇಕಾದ ಸಸಿಗಳನ್ನು ಬೆಳೆಸಲು ಕಡಿಮೆ ಜಾಗ ಸಾಕಾಗುತ್ತದೆ ಎಂದು ಮಾಹಿತಿ ನೀಡಿದರು.
 
ಕೊಡಗು ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ರಾದ ಕೆಂಚರೆಡ್ಡಿ ಮಾತನಾಡಿ, ಭತ್ತ ಗದ್ದೆಗಳನ್ನು ಪಾಳು ಬಿಡದೆ ಭತ್ತದ ಕೃಷಿ ಮಾಡಬೇಕು. ಭತ್ತ ಕೃಷಿಯಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರಗತಿಪರ ರೈತರಾದ ಪೊಡನೋಳಂಡ ಕೆ. ಬೋಪಣ್ಣ ಮಾತನಾಡಿ, ಎರಡರಿಂದ ಮೂರು ಜನ ಕಾರ್ಮಿಕರ ಸಹಾಯದಿಂದ ಪ್ರತಿ ದಿನದಲ್ಲಿ 4 ಎಕರೆ ಭತ್ತ ನಾಟಿ ಮಾಡಬಹುದಾಗಿದೆ ಎಂದು ತಿಳಿಸಿದರು.
 
ಪೊನ್ನಂಪೇಟೆ ಕೃಷಿ ವಿಸ್ತರಣಾ ಕೇಂದ್ರದ ನಿವೃತ್ತ ಪ್ರಾಧ್ಯಾಪಕರಾದ ಪೂಣಚ್ಚ, ತಾ.ಪಂ.ಸದಸ್ಯರಾದ ರಶ್ಮೀ ಕುಮುದಾ, ಹಾಕತ್ತೂರು ಎಪಿಎಂಸಿ ಸದಸ್ಯರಾದ ನಿರ್ಮಲಾ ನಂಜಪ್ಪ, ರೈತರು, ಹಾಕತ್ತೂರು ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next