Advertisement

ಕುಕ್ಕೆ: ಆಮೆಗತಿಯಲ್ಲಿ ಚತುಷ್ಪಥ ಕಾಂಕ್ರೀಟ್‌ ಕಾಮಗಾರಿ

09:31 PM May 19, 2019 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ರಸ್ತೆ ವಿಸ್ತರಣೆ, ಕಾಂಕ್ರೀಟ್‌ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. 180 ಕೋಟಿ ರೂ. ಮಾಸ್ಟರ್‌ ಪ್ಲಾನ್‌ 2ನೇ ಹಂತದಲ್ಲಿ 68.60 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಾಗಿದೆ. ಕುಮಾರಧಾರಾ-ಪೇಟೆ ತನಕದ ಚತುಷ್ಪಥ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಆಮೆಗತಿಯಲ್ಲಿ ಸಾಗುತ್ತಿದೆ. ಹಾಲಾಡಿ ದಯಾನಂದ ಶೆಟ್ಟಿ ಅವರು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದಾರೆ.

Advertisement

ಕೋಟ್ಯಂತರ ವೆಚ್ಚದ ಈ ಕಾಮಗಾರಿಯನ್ನು ಕೈಗೆತ್ತಿಕೊಂಡು ಮೂರು ತಿಂಗಳಾದರೂ ಇನ್ನು ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಕುಮಾರಧಾರಾ-ಕಾಶಿಕಟ್ಟೆ ತನಕ ಅಗೆದಿಟ್ಟ ರಸ್ತೆಯಲ್ಲಿ 900 ಮೀ. ಜಲ್ಲಿ ಹಾಕಿ ಪ್ರಾಥಮಿಕ ಬೆಡ್‌ ಹಾಕಲಾಗಿದೆ. 200 ಮೀ.ನಷ್ಟು ದೂರ ಕಾಂಕ್ರೀಟ್‌ ನಡೆಸಲಾಗಿದೆ. ಬಸ್‌ ನಿಲ್ದಾಣ-ಆದಿಸುಬ್ರಹ್ಮಣ್ಯ ರಸ್ತೆಯಲ್ಲಿ 300 ಮೀ.ನಷ್ಟು ದೂರ ಜಲ್ಲಿ ಹಾಕಲಾಗಿದೆ. ನೂಚಿಲ ರಸ್ತೆಯಲ್ಲಿ 150 ಮೀ.ನಷ್ಟು ದೂರ ಮಣ್ಣಿನ ಕಾಮಗಾರಿಗಳಷ್ಟೆ ನಡೆದಿದೆ.

ಸಂಚಾರವೂ ದುಸ್ತರ
ಕ್ಷೇತ್ರದಲ್ಲಿ ಜನದಟ್ಟಣೆ ಹೆಚ್ಚುತ್ತಲಿದ್ದು, ವಾಹನ ದಟ್ಟಣೆಯೂ ಅಧಿಕವಾಗಿದೆ. ನಿತ್ಯವೂ ಸಾರಿಗೆ ಬಸ್‌ ಸಹಿತ ಸಹಸ್ರಾರು ವಾಹನಗಳು ಕಾಮಗಾರಿ ನಡೆಯುತ್ತಿರುವ ರಸ್ತೆಯ ಪಕ್ಕದಲ್ಲಿ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಲಿವೆ. ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವುದು ಕ್ಷೇತ್ರಕ್ಕೆ ಬರುವ ಭಕ್ತರ ದೃಷ್ಟಿಯಿಂದ ಅಗತ್ಯವಾಗಿದೆ.

ಕಾರ್ಮಿಕರ ಕೊರತೆ
ಗುತ್ತಿಗೆದಾರರು ವೇಗವಾಗಿ ಕಾಮಗಾರಿ ನಡೆಸಲು ಆಧುನಿಕ ಯಂತ್ರಗಳನ್ನು ಬಳಸಿಕೊಂಡಿಲ್ಲ. ಸಾಮಾನ್ಯ ಯಂತ್ರೋಪಕರಣಗಳನ್ನೆ ಬಳಸುತ್ತಿದ್ದು, ದಿನಕ್ಕೆ 10 ಮೀ.ನಷ್ಟು ದೂರ ಕೂಡ ಕಾಂಕ್ರೀಟು ನಡೆಯುತ್ತಿಲ್ಲ ಎನ್ನುವ ಆರೋಪವಿದೆ. ಕಾರ್ಮಿಕರೂ ಸಾಕಷ್ಟು ಪ್ರಮಾಣದಲ್ಲಿ ಕೆಲಸದಲ್ಲಿ ಇಲ್ಲ. ಅನ್ಯ ರಾಜ್ಯಗಳ ಕಾರ್ಮಿಕರಿಗೆ ಕೌಶಲ ಕೊರತೆ ಇದೆ. ಚುನಾವಣೆಗೆಂದು ಊರಿಗೆ ತೆರಳಿದ್ದ ಕೆಲ ಕಾರ್ಮಿಕರು ಇನ್ನೂ ಕೆಲಸಕ್ಕೆ ಮರಳಿಲ್ಲ. ಇದರಿಂದ ಕಾಮಗಾರಿಯ ವೇಗಕ್ಕೆ ಹಿನ್ನಡೆಯಾಗಿದೆ.

ತ್ವರಿತ ಕಾಮಗಾರಿಗೆ ಒತ್ತಾಯ
ಕಾಮಗಾರಿ ಆರಂಭ ಹಂತ ದಿಂದಲೇ ಕುಂಟುತ್ತಾ ಸಾಗುತ್ತಲಿದೆ. ಪುಣ್ಯ ನದಿ ಕುಮಾರಧಾರಾಕ್ಕೆ ತೀರ್ಥ ಸ್ನಾನಕ್ಕೆ ತೆರಳುವವರು, ಶಾಲೆ- ಕಾಲೇಜುಗಳಿಗೆ ತೆರಳುವವರು ನಿಧಾನಗತಿಯ ಕಾಮಗಾರಿಯಿಂದ ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ವೇಗದಲ್ಲಿ ಮುಂದುವರಿದರೆ ಈ ರಸ್ತೆ ಮುಕ್ತಾಯ ಹಂತಕ್ಕೆ ತಲುಪಲು ವರ್ಷಗಳೇ ಉರುಳಿದರೂ ಅಚ್ಚರಿ ಪಡಬೇಕಿಲ್ಲ. ಮಳೆಗಾಲ ಆರಂಭಗೊಂಡರೆ ಎಲ್ಲ ಕೆಲಸ ಕಾರ್ಯಗಳೂ ಸ್ಥಗಿತಗೊಳ್ಳಬಹುದು. ಕೆಲ ದಿನಗಳಲ್ಲೇ ಶಾಲೆ, ಕಾಲೇಜುಗಳು ಆರಂಭಗೊಳ್ಳಲಿವೆ. ಹಾಗಾಗಿ ಕಾಮಗಾರಿ ತ್ವರಿತಕ್ಕೆ ಸ್ಥಳೀಯರಿಂದ ಒತ್ತಾಯಗಳು ವ್ಯಕ್ತಗೊಂಡಿದೆ.

Advertisement

ರಸ್ತೆಗಳ ಅಭಿವೃದ್ಧಿ
2ನೇ ಹಂತದ ಕಾಮಗಾರಿಯಲ್ಲಿ 8.55 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ 68.60 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಲೋಕೋಪಯೋಗಿ ಇಲಾಖೆಯಿಂದ ದೇವಸ್ಥಾನಕ್ಕೆ ಹಸ್ತಾಂತರಗೊಂಡ 2.46 ಕಿ.ಮೀ ರಸ್ತೆ, ದೇವಸ್ಥಾನದ ಅ ಧೀನದಲ್ಲಿರುವ 5.14 ಕಿ.ಮೀ. ಮತ್ತು ಪಂ.ನ 581 ಮೀ. ಉದ್ದದ ರಸ್ತೆಗಳು ಸೇರಿವೆ.

ರಾಜಗೋಪುರದಿಂದ ಪೊಲೀಸ್‌ ಚೌಕಿ ಉದ್ದ 195 ಮೀ., ಕಾಶಿಕಟ್ಟೆಯಿಂದ ಪೊಲೀಸ್‌ ಚೌಕಿ ತನಕದ ಉದ್ದ 364 ಮೀ., ಕುಮಾರಧಾರೆಯಿಂದ ಕಾಶಿಕಟ್ಟೆ ತನಕದ 1089 ಮೀ. ಉದ್ದ, ಪೊಲೀಸ್‌ ಚೌಕಿಯಿಂದ ಪ್ರಶಾಂತ್‌ ರೆಸ್ಟೋರೆಂಟ್‌ ವರೆಗೆ 812 ಮೀ. ಉದ್ದದ ರಸ್ತೆಗಳು ಅಭಿವೃದ್ಧಿಯಾಗಲಿವೆ.

ದೇವಸ್ಥಾನಕ್ಕೆ ಹಸ್ತಾಂತರಗೊಂಡ ರಸ್ತೆಗಳು ಅಂದಾಜು 36.10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿದೆ. ಪೊಲೀಸ್‌ ಚೌಕಿ ಕಾಶಿಕಟ್ಟೆ ನಡುವೆ 359 ಮೀ., ಅಕ್ಷರಾ ಗೆಸ್ಟ್‌ ಹೌಸ್‌ ಯಾಗ ಶಾಲೆ ನಡುವೆ 681 ಮೀ., ಯಾಗಶಾಲೆ ರಸ್ತೆ 124 ಮೀ, ಕಾಶಿಕಟ್ಟೆ-ಜನರಲ್‌ ಡಾರ್ಮಿಟರಿ ನಡುವೆ 124 ಮೀ., ಸ್ಕಂದಾಕೃಪಾ ಗೆಸ್ಟ್‌ ಹೌಸ್‌ ದೇವಸ್ಥಾನದ ಉತ್ತರ ಬಾಗಿಲು ವಿವಿಐಪಿ ಗೆಸ್ಟ್‌ ಹೌಸ್‌ ಎದುರು 259 ಮೀ., ರಾಜಗೋಪುರದಿಂದ ವಿವಿಐಪಿ ಗೆಸ್ಟ್‌ ಹೌಸ್‌ 265 ಮೀ., ಅರಳಿಕಟ್ಟೆಯಿಂದ ದೇವರಗದ್ದೆ ತನಕ 284 ಮೀ., ದೇವಸ್ಥಾನದ ಉತ್ತರ ಬಾಗಿಲಿನಿಂದ ಜನರಲ್‌ ಡಾರ್ಮಿಟರಿ ತನಕ 221 ಮೀ. ಉದ್ದ, ಜನರಲ್‌ ಡಾರ್ಮಿಟರಿ ಸಂಪರ್ಕ ರಸ್ತೆ 82 ಮೀ., ಇಂಜಾಡಿ ವಿವಿಐಪಿ ಕಟ್ಟಡದ ರಸ್ತೆ 2,583 ಮೀ. ಉದ್ದ ಸೇರಿ ಒಟ್ಟು 5,595 ಮೀ. ಉದ್ದದ ರಸ್ತೆ ಅಭಿವೃದ್ಧಿಯಾಗಲಿದೆ.

ಕಂಬಗಳ ತೆರವೂ ಆಗಿಲ್ಲ
ಕುಮಾರಧಾರಾ-ಕಾಶಿಕಟ್ಟೆ ತನಕ ರಸ್ತೆ ಇಕ್ಕಟ್ಟಿನಿಂದ ಕೂಡಿದೆ. ಇಲ್ಲಿ ವಾಹನಗಳಿಗೆ ಸಂಚರಿಸಲು ಸಾಕಷ್ಟು ಜಾಗವಿಲ್ಲದೆ ಸಂಚಾರದ ವೇಳೆ ತುಂಬಾ ತೊಂದರೆ ಉಂಟಾಗುತ್ತಿದೆ. ರಸ್ತೆ ಮಧ್ಯೆ ಇರುವ ವಿದ್ಯುತ್‌ ಕಂಬ ತೆರವು ಪ್ರಗತಿಯಲ್ಲಿದ್ದರೂ ಕುಮಾರಧಾರಾ ಆರಂಭದ 3-4 ಕಂಬಗಳ ತೆರವು ಇನ್ನೂ ಆಗಿಲ್ಲ.

ವೇಗ ಹೆಚ್ಚಿಸಲು ಸೂಚನೆ
ಚತುಷ್ಪಥ ರಸ್ತೆ ವಿಸ್ತರಣೆ ಕಾಮಗಾರಿ ಕುರಿತು ನಿಗಾ ವಹಿಸುತ್ತಿದ್ದೇವೆ. ಕಾಮಗಾರಿ ವೇಗ ಹೆಚ್ಚಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
– ನಿತ್ಯಾನಂದ ಮುಂಡೋಡಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಸುಬ್ರಹ್ಮಣ್ಯ ದೇವಸ್ಥಾನ

ಶೀಘ್ರ ಮುಗಿಸಲು ಶ್ರಮ
ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ಆರಂಭಗೊಂಡಲ್ಲಿ ಕಾಮಗಾರಿ ಸ್ಥಗಿತಗೊಳಿಸುವುದು ಅನಿವಾರ್ಯ. ಮಳೆ ಆರಂಭವಾಗುವುದರೊಳಗೆ ಆದಷ್ಟು ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸುತ್ತಿದ್ದೇವೆ.
– ಶ್ರೀನಿವಾಸ, ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಪಿಡಬ್ಲ್ಯೂಡಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next