Advertisement

ಲೋಕಲ್‌ ಬಸ್‌ಗೆಹೈಟೆಕ್‌ ಟಚ್‌:ಸಿಟಿಬಸ್‌ ಮಾಹಿತಿ ಇನ್ನುಬೆರಳತುದಿಯಲ್ಲಿ

05:58 AM Feb 25, 2019 | |

ಮಹಾನಗರ : ನೀವು ಮಂಗಳೂರಿನಲ್ಲಿ ಸಿಟಿ ಬಸ್‌ಗಳಲ್ಲಿ ಓಡಾಡೋದಾದ್ರೆ ಬಸ್‌ ಎಷ್ಟು ಗಂಟೆಗೆ ಬರುತ್ತದೆ ಎಂದಿನ್ನು ಅವರಿವರನ್ನು ಕೇಳಬೇಕೆಂದಿಲ್ಲ. ಯಾವ ನಂಬರ್‌ ಬಸ್‌ ಎಲ್ಲಿ ಬರುತ್ತದೆ, ಎಷ್ಟು ಗಂಟೆಗೆ ಬರುತ್ತದೆ ಎಂಬುವುದನ್ನು ಲೈವ್‌ ಆಗೇ ವೀಕ್ಷಿಸಬಹುದು. ಇದೇ ಮೊದಲ ಬಾರಿಗೆ ಮಂಗಳೂರು ಸಿಟಿ ಬಸ್‌ ಪ್ರಯಾಣಿಕರಿಗೆಂದು ‘ಚಲೋ’ ಎಂಬ ಆ್ಯಪ್‌ ಹೊರತರುತ್ತಿದ್ದು, ಫೆ. 25ರಿಂದಲೇ ಕಾರ್ಯಾಚರಿಸಲಿದೆ.

Advertisement

ನಗರ ಸ್ಮಾರ್ಟ್‌ಸಿಟಿ ಆಗುವತ್ತ ದಾಪುಗಾಲಿಡುತ್ತಿರುವಾಗ ಇಲ್ಲಿ ಸಂಚರಿಸುವ 
ಸಿಟಿ ಬಸ್‌ಗಳು ಕೂಡ ಸ್ಮಾರ್ಟ್‌ ಆಗುತ್ತಿವೆ. ಜಿಲ್ಲಾ ಬಸ್‌ ಮಾಲಕರ ಸಂಘ ಮತ್ತು ಚಲೋ ಸಂಸ್ಥೆಯ ಸಹಯೋಗದೊಂದಿಗೆ ಈ ಆ್ಯಪ್‌ ನಿರ್ಮಿಸಲಾಗಿದೆ. ಫೆ. 25ರಿಂದ ಆ್ಯಪ್‌ ಮೂಲಕ ಬಸ್‌ಗಳ ಸಮಗ್ರ ಮಾಹಿತಿ ಲಭ್ಯವಿರಲಿದ್ದು, ಮಂಗಳೂರಿನ ಬ್ಯುಸಿ ಲೈಫ್‌ ನಲ್ಲಿ ಸಿಟಿ ಬಸ್‌ಗಳು ಪ್ರಯಾಣಿಕರಿಗೆ ಮತ್ತಷ್ಟು ಹತ್ತಿರವಾಗಲಿವೆ. ನಗರದಲ್ಲಿ ಸದ್ಯ 340 ಸಿಟಿಬಸ್‌ಗಳು ಸಂಚರಿಸುತ್ತಿದ್ದು, ಆ್ಯಪ್‌ನ ಮೊದಲ ಭಾಗವಾಗಿ 320 ಬಸ್‌ ಗಳಲ್ಲಿ ಈಗಾಗಲೇ ಜಿಪಿಎಸ್‌ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಆ್ಯಪ್‌ ಹೇಗೆ ಕಾರ್ಯನಿರ್ವಹಿಸುತ್ತದೆ?
‘ಚಲೋ’ ಆ್ಯಪ್‌ನಲ್ಲಿ ಬಸ್‌ನ ಲೈವ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಇದ್ದು, ಮೊಬೈಲ್‌ ಜಿಪಿಎಸ್‌ ಆಧಾರದ ಮೇಲೆ ಬಸ್‌ಗಳ ನಿಖರ ಮಾಹಿತಿಯನ್ನು ಮೊಬೈಲ್‌ನಲ್ಲಿ ತಿಳಿಯಬಹುದು. ಮ್ಯಾಪ್‌ನಲ್ಲಿ ಟ್ಯಾಪ್‌ ಮಾಡಿ ಸದ್ಯ ಬಸ್‌ ಎಲ್ಲಿದೆ? ಎಷ್ಟು ಗಂಟೆಗೆ ನಿಲ್ದಾಣಕ್ಕೆ ಆಗಮಿಸುತ್ತದೆ, ಚಾಲಕ ಎಷ್ಟು ಕಿ.ಮೀಟರ್‌ ವೇಗದಲ್ಲಿ ಚಲಾಯಿಸುತ್ತಿದ್ದಾನೆ, ರೂಟ್‌ ಬದಲಾವಣೆ ಮಾಡಿದರೂ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ. ಅಷ್ಟೇ ಅಲ್ಲ, ಒಂದು ಕಡೆಯಿಂದ ಮತ್ತೂಂದೆಡೆ ಚಲಿಸಲು ಎಷ್ಟು ಸಮಯ ಬೇಕು? ಮುಂದಿನ ನಿಲ್ದಾಣ ಸಹಿತ ಹಲವು ಮಾಹಿತಿ ಆ್ಯಪ್‌ನಲ್ಲಿ ಲಭ್ಯವಿದೆ.

ಇದರಿಂದಾಗಿ ಬಸ್‌ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವುದು ತಪ್ಪುತ್ತದೆ. ಈ ಆ್ಯಪ್‌ನಲ್ಲಿ ಟ್ರಿಪ್‌ ಪ್ಲಾನ್‌ ಮಾಡಿಕೊಳ್ಳಲು ಕೂಡ ಅವಕಾಶವಿದೆ. ಉದಾಹರಣೆಗೆ ಪಿವಿಎಸ್‌ ವೃತ್ತದಿಂದ ತಲಪಾಡಿಗೆ ತೆರಳಬೇಕಾದರೆ ಟ್ರಿಪ್‌ ಪ್ಲಾನರ್‌ಗೆ ತೆರಳಿ ನಿಮ್ಮ ಲೊಕೇಶನ್‌ನಿಂದ ತಲಪಾಡಿ ನಮೂದಿಸಿದರೆ ತಲಪಾಡಿಗೆ ತೆರಳಲು ಹತ್ತಿರದ ಬಸ್‌ ನಿಲ್ದಾಣ ಯಾವುದು, ಎಷ್ಟು ಗಂಟೆಗೆ ಬಸ್‌ ಬರುತ್ತದೆ, ವೇಗವಾದ ರೂಟ್‌, ಜತೆಗೆ ಬೆಲೆಯ ಮಾಹಿತಿಯೂ ಸಿಗಲಿದೆ.

ಕಮೆಂಟ್‌ ಬಾಕ್ಸ್‌ನಲ್ಲಿ ಸೂಚನೆ ನೀಡಬಹುದು
ಈ ಆ್ಯಪ್‌ನಲ್ಲಿ ಮುಂದುವರಿದ ಭಾಗವಾಗಿ ಕಮೆಂಟ್‌ ಬಾಕ್ಸ್‌ ಪರಿಚಯಿಸಲಾಗುತ್ತಿದೆ. ಇದರ ಮೂಲಕ ಮಹಾನಗರದ ಬಸ್‌ ವ್ಯವಸ್ಥೆಯ ಬಗ್ಗೆ ಪ್ರಯಾಣಿಕ ಕಮೆಂಟ್‌ ಕೂಡ ಮಾಡಬಹುದು. ಅಲ್ಲದೆ, ಉತ್ತಮ ಪ್ರಯಾಣಕ್ಕೆ ಮುಂದಿನ ದಿನಗಳಲ್ಲಿ ಯಾವೆಲ್ಲ ಹೊಸ ಯೋಜನೆಗಳನ್ನು ಜಾರಿಗೊಳಿಸಬಹುದು ಎಂಬ ಸೂಚನೆ ನೀಡಬಹುದು.

Advertisement

ಆಪತ್ಕಾಲಕ್ಕೆ ಎಸ್‌ಒಎಸ್‌ ಸಿಸ್ಟಮ್‌
ತುರ್ತು ಸಂದರ್ಭಗಳಲ್ಲಿ ಕುಟುಂಬ ಮತ್ತು ಮಿತ್ರರೊಂದಿಗೆ ತತ್‌ಕ್ಷಣ ಸೂಚನೆ ನೀಡಲು ಎಸ್‌ ಒಎಸ್‌ ತಂತ್ರಜ್ಞಾನ ಕೂಡ ಚಲೋ ಆ್ಯಪ್‌ನಲ್ಲಿದೆ. ಎಸ್‌ಒಎಸ್‌ ಆಯ್ಕೆಯಲ್ಲಿ ಕುಟುಂಬದವರ ಅಥವಾ ಸ್ನೇಹಿತರ ಮೊಬೈಲ್‌ ಸಂಖ್ಯೆಯನ್ನು ನಮೂದು ಮಾಡಬೇಕು. ಒಂದು ವೇಳೆ ಅಪಾಯದಲ್ಲಿ ಸಿಲುಕಿದರೆ ಈ ಸಂಖ್ಯೆಗೆ ತುರ್ತು ಸಂದೇಶ ರವಾನೆಯಾಗುತ್ತದೆ. 

ಪ್ರಯಾಣಿಕರೆಡೆಗೆ ಆ್ಯಪ್‌ ಮಾಹಿತಿ
ಚಲೋ ಆ್ಯಪ್‌ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು, ಆ್ಯಂಡ್ರಾಯ್ಡ ಮೊಬೈಲ್‌ ಫೋನ್‌ ಬಳಕೆದಾರರು ಡೌನ್‌ಲೋಡ್‌ ಮಾಡಬಹುದು. ಅಲ್ಲದೆ, ಆ್ಯಪ್‌ ನಿರ್ಮಾಣಕ್ಕೆ ಸಂಬಂಧಿಸಿದ 15 ಮಂದಿ ತಂಡವು ನಗರದಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಆ್ಯಪ್‌ ಕುರಿತ ಮಾಹಿತಿ ನೀಡಲಿದೆ. ಆ್ಯಪ್‌ ಡೌನ್‌ಲೋಡ್‌, ಬಳಕೆ ಸಹಿತ ಮತ್ತಿತರ ಮಾಹಿತಿಯುಳ್ಳ ಪಾಂಪ್ಲೆಟ್‌ನ್ನು ಹಂಚಲಿದ್ದಾರೆ. ಕೆಲವು ಕಡೆಗಳಲ್ಲಿ ಆ್ಯಪ್‌ ಕುರಿತ ವೀಡಿಯೋ ಮೂಲಕ ಜಾಗೃತಿ ಮೂಡಿಸಲಿದ್ದಾರೆ.

ಪ್ರಯಾಣಿಕ ಸ್ನೇಹಿ ಆ್ಯಪ್‌
ಪ್ರಯಾಣಿಕ ಸ್ನೇಹಿ ಸಾರಿಗೆ ವ್ಯವಸ್ಥೆಯ ಮೊದಲನೇ ಹೆಜ್ಜೆಯಾಗಿ ನಗರ ಸಿಟಿಬಸ್‌ ಆ್ಯಪ್‌ ಮೂಲಕ ಟ್ರಾಕಿಂಗ್‌ ಮಾಡುವ ಸೌಲಭ್ಯ ಪಡೆಯಲಿದೆ. ಬಸ್‌ಗಳಿಗೆ ಜಿಪಿಎಸ್‌ ಅಳವಡಿಸುವುದರಿಂದ ಪ್ರಯಾಣಿಕರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈಗಾಗಲೇ ಚಲೋ ಆ್ಯಪ್‌ ಅನ್ನು ಭೋಪಾಲ್‌ನ ಸಾರಿಗೆ ವ್ಯವಸ್ಥೆಯಲ್ಲಿ ಉಪಯೋಗಿಸುತ್ತಿದ್ದು, ಯಶಸ್ವಿಯಾಗಿದೆ. ನಗರದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ವಿಶ್ವಾಸವಿದೆ. 
ಶಶಿಕಾಂತ್‌ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

ಪ್ರಯಾಣಿಕರಿಗೆ ಅನುಕೂಲ
ಸಿಟಿ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಚಲೋ ಆ್ಯಪ್‌ ಪರಿಚಯಿಸುತ್ತಿದ್ದೇವೆ. ಆ್ಯಪ್‌ನಲ್ಲಿ ಸದ್ಯ ಯಾವುದೇ ನ್ಯೂನ್ಯತೆಗಳಿದ್ದರೂ ಸದ್ಯದಲ್ಲಿಯೇ ಅವುಗಳು ಸರಿಹೊಂದಲಿದೆ.
– ದಿಲ್‌ರಾಜ್‌ ಆಳ್ವ,
ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next