Advertisement

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

07:24 PM Jan 29, 2024 | ಕೀರ್ತನ್ ಶೆಟ್ಟಿ ಬೋಳ |

ದಶಕದ ಹಿಂದೆ ಕಾನೂನು ತೊಡಕುಗಳನ್ನು ಎದುರಿಸಿದ ಕಂಬಳ ಸ್ಪರ್ಧೆ ಬಳಿಕ ಹಲವು ರೀತಿಯಲ್ಲಿ ಬದಲಾವಣೆ ಕಂಡಿದೆ. ಕಾನೂನು ರೀತಿಯಲ್ಲಿ ಕಂಬಳ ನಡೆಸಬೇಕಾದ ಅನಿವಾರ್ಯತೆಗಾಗಿ ಒಂದಿಷ್ಟು ಹೊಸತನಕ್ಕೆ ಕಂಬಳ ಒಗ್ಗಿಕೊಂಡಿದೆ. ಹೊಸ ತಂತ್ರಜ್ಞಾನಗಳು ನವ ರೂಪಕ್ಕೆ ಕೊಡುಗೆ ನೀಡಿದೆ. ಎರಡು ಮೂರು ಜಿಲ್ಲೆಗೆ ಸೀಮಿತವಾಗಿದ್ದ ಕಂಬಳ ಇದೀಗ ವಿಶ್ವಮಟ್ಟದಲ್ಲಿ ಪ್ರಸಿದ್ದಿ ಪಡೆದಿದೆ.

Advertisement

ತುಳುನಾಡಿನ ಕೋಣಗಳ ಓಟ ಇದೀಗ ಪ್ರಸಿದ್ಧಿಯ ಉತ್ತುಂಗದಲ್ಲಿದೆ. ಆದರೆ ಇದೇ ಸಮಯದಲ್ಲಿ ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ. ಕಂಬಳ ನೋಡುವ, ಭಾಗವಹಿಸುವ ಎಲ್ಲರ ಸಮಸ್ಯೆ ಎಂದರೆ ನಿಗದಿತ ಸಮಯದಲ್ಲಿ ಕೂಟ ಮುಗಿಯದೇ ಇರುವುದು. ಕೂಟವನ್ನು 24 ಗಂಟೆಯೊಳಗೆ ಮುಗಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವಿದೆ. ಆದರೆ 24 ಗಂಟೆ ಬಿಡಿ, 36 ಗಂಟೆಯಾದರೂ ಕೆಲವು ಕಂಬಳಗಳು ಮುಗಿಯುತ್ತಿಲ್ಲ. ಭವಿಷ್ಯದಲ್ಲಿ ನಿರಾತಂಕವಾಗಿ ಕಂಬಳ ನಡೆಸಲು ಇದು ಸಮಸ್ಯೆಯಾಗಿದೆ.

ಬರಲಿದೆ ಗೇಟ್ ಸಿಸ್ಟಂ

ಕೋಣಗಳನ್ನು ಸ್ಪರ್ಧೆಗೆ ಅಣಿಗೊಳಿಸುವ ಗಂತಿನಲ್ಲಿ (ಗಂತು- ಕೋಣಗಳ ಸ್ಪರ್ಧೆ ಆರಂಭವಾಗುವ ಜಾಗ) ಸಮಯ ವ್ಯರ್ಥವಾಗುತ್ತದೆ. ಗಂತಿನಲ್ಲಿ ಎರಡು ಕರೆಯಲ್ಲಿ ಕೋಣಗಳನ್ನು ಸಮಾನ ರೇಖೆಯಲ್ಲಿ ನಿಲ್ಲಿಸಬೇಕಾಗುತ್ತದೆ. ಕೋಣಗಳು ಸರಿಯಾಗಿ ನಿಲ್ಲದ ಕಾರಣ ಇಲ್ಲಿ ಬಹಳಷ್ಟು ಸಮಯ ಕಳೆದು ಹೋಗುತ್ತದೆ. ಕಂಬಳ ವಿಳಂಬವಾಗಲು ಇದು ಪ್ರಮಖ ಕಾರಣ. ಹೀಗಾಗಿ ಗಂತಿನ ಸಮಸ್ಯೆಗೆ ಪರಿಹಾರವೊಂದು ಹುಡುಕಲಾಗಿದೆ. ಅದುವೇ ಕುದುರೆ ರೇಸ್ ರೀತಿಯ ಗೇಟ್ ಸಿಸ್ಟಂ.

ಹೌದು, ಕುದುರೆ ರೇಸ್ ನಂತೆ ಕಂಬಳಕ್ಕೂ ಸ್ವಯಂ ಚಾಲಿತ ಗೇಟ್ ವ್ಯವಸ್ಥೆ ತರಲಾಗುತ್ತಿದೆ. ಎರಡೂ ಕರೆಗಳ ಗಂತಿನಲ್ಲಿ ಗೇಟ್ ಇರಿಸಿ ನಿಗದಿತ ಸಮಯದಲ್ಲಿ ಗೇಟ್ ತೆರಲಾಗುತ್ತದೆ. ಆ ಸಮಯದಲ್ಲಿ ಕೋಣಗಳ ಓಟ ಆರಂಭವಾಗುತ್ತದೆ. ಇದರಿಂದ ಸಮಯ ಪೋಲಾಗುವುದನ್ನು ತಡೆಯಬಹುದು ಎನ್ನುವುದು ಲೆಕ್ಕಾಚಾರ.

Advertisement

ಕಾರ್ಯ ನಿರ್ವಹಣೆ ಹೇಗೆ?

ಪ್ರತಿ ರೇಸ್ ಗೆ ಮೊದಲ ಐದು ನಿಮಿಷ ಗೇಟ್ ಮುಚ್ಚಿರುವುದಿಲ್ಲ. (ಸೆಮಿ ಫೈನಲ್ – ಫೈನಲ್ ಹಂತದಲ್ಲಿ ಇನ್ನೂ ಹೆಚ್ಚು ಸಮಯ ನೀಡಬಹುದು) ಈ ಸಮಯದೊಳಗೆ ಕೋಣಗಳನ್ನು ಅಣಿಗೊಳಿಸಿ ಸ್ಪರ್ಧೆಗೆ ಬಿಡಬಹುದಾದಅವಕಾಶವಿದೆ. ಈ ಸಮಯದೊಳಗೆ ಸದ್ಯ ರುವಂತೆ ರೆಫ್ರಿಯೇ ಕೋಣಗಳ ಬಿಡುವ ಜವಾಬ್ದಾರಿ ಹೊಂದಿರುತ್ತಾರೆ. ಒಂದು ವೇಳೆ ನಿಗದಿತ ಸಮಯದೊಳಗೆ ಸ್ಪರ್ಧೆ ಆರಂಭವಾಗದಿದ್ದರೆ ಆಗ ಗೇಟ್ ಮುಚ್ಚಲಾಗುತ್ತದೆ.

ಗಂತಿನಲ್ಲಿ ಕೋಣಗಳ ಎದುರಗಡೆ ಎರಡೂ ಕರೆಯಲ್ಲಿ ಗೇಟ್ ಮುಚ್ಚಲಾಗುತ್ತದೆ. ಈ ಗೇಟುಗಳು ಮೇಲಿನಿಂದ ಕೆಳಕ್ಕೆ ಇಳಿಯಲ್ಪಟ್ಟ ರೀತಿಯಲ್ಲಿರುತ್ತದೆ. ಇದು ದಂಡೆಯ ಮಟ್ಟದವರೆಗೆ ಇರಲಿದೆ. ಈ ಗೇಟ್ ಗಳು ಜಾಲರಿ (Mesh) ಹೊಂದಿರುವ ಕಾರಣ ಕೋಣಗಳಿಗೆ ಮತ್ತು ಓಡಿಸುವವರಿಗೆ ಎದುರಿರುವ ಕರೆ ಸ್ಪಷ್ಟವಾಗಿ ಕಾಣುತ್ತದೆ. ಗೇಟ್ ಮುಚ್ಚಿದ ತಕ್ಷಣ 100 ಸೆಕೆಂಡ್ಸ್ ಗಳ ಕ್ಷಣಗಣನೆ ಆರಂಭವಾಗುತ್ತದೆ. ಗೇಟ್ ನ ಎರಡು ಕಂಬಗಳಲ್ಲಿ ತಲಾ ಒಂದರಂತೆ ಕೆಂಪು ಬಣ್ಣದ ಲೈಟ್ ಉರಿಯುತ್ತದೆ. ಕೊನೆಯ 10 ಸೆಕೆಂಡ್ಸ್ ಗೆ ಬಂದಾಗ ಲೈಟ್ ಬಣ್ಣ ಹಳದಿಗೆ ತಿರುಗುತ್ತದೆ. ಕೌಂಟ್ ಡೌನ್ ಜೀರೊ ಆಗುವಾಗ ಹಸಿರು ದೀಪ ಬಂದು ಏಕಕಾಲದಲ್ಲಿ ಎರಡೂ ಕರೆಯ ಗೇಟ್ ಗಳು ತೆರೆದುಕೊಳ್ಳುತ್ತದೆ. ಈ ಗೇಟ್ ಗಳು ಮೇಲ್ಮುಖವಾಗಿ ತೆರೆದುಕೊಳ್ಳುತ್ತದೆ. ಆಗ ಕೋಣಗಳನ್ನು ಬಿಡಲೇ ಬೇಕು.

ಈ ಸಮಯದೊಳಗೆ ಒಂದು ವೇಳೆ ಯಾವುದೇ ಬದಿಯ ಕೋಣ ಗೇಟ್ ಗೆ ಸ್ಪರ್ಷಿಸಿದರೆ ಫೌಲ್ ಸಿಗ್ನಲ್ ಬರುತ್ತದೆ. ಅಲ್ಲದೆ ಟೈಮರ್ ಕೂಡಾ ಆಗ ನಿಲ್ಲುತ್ತದೆ. ಆಗ ಕೋಣಗಳನ್ನು ಹಿಂದೆ ತರಿಸಿ ಮತ್ತೆ ಸಜ್ಜುಗೊಳಿಸಬೇಕು.

ಸದ್ಯ ಈ ಯೋಜನೆಯು ಪರಿಕಲ್ಪನಾ ಮಾದರಿಯಲ್ಲಿದ್ದು, ಮುಂದೆ ಸಿಗುವ ಸಲಹೆಗಳನ್ನು ಪರಿಗಣಿಸಿ ಯೋಜನೆಯನ್ನು ಇನ್ನಷ್ಟು ಪಕ್ವಗೊಳಿಸುತ್ತೇವೆ. ಸದ್ಯ ಅಲ್ಮ್ಯೂನಿಯಂ ಪಿಲ್ಲರ್ ರಚನೆ ಮಾಡಿ, ಫೈಬರ್ ನೆಟ್ ಗೇಟ್ ಮಾಡಲಾಗಿದೆ. ಮುಂದೆ ಕೃತಕ ಬುದ್ದಿಮತ್ತೆ (AI) ಬಳಸಿ ಕೋಣಗಳ ಸ್ಥಿತಿ (position) ಟ್ರ್ಯಾಕ್ ಮಾಡುವ ಯೋಚನೆಯಿದೆ ಎನ್ನುತ್ತಾರೆ ಎಂದು ಮಾಹಿತಿ ನೀಡುತ್ತಾರೆ ಈ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಿರುವ ಸ್ಕೈ ವೀವ್ ಸಂಸ್ಥೆಯ ರತ್ನಾಕರ ನಾಯಕ್ ಕಾರ್ಕಳ.

ಸದ್ಯ ಮೂರು ಹಂತದಲ್ಲಿ ಇದನ್ನು ಅಭಿವೃದ್ದಿ ಮಾಡಲಾಗುತ್ತಿದೆ. ಪ್ರತಿಯೊಂದು ಹಂತಕ್ಕೆ ಸುಮಾರು ಎರಡು ಲಕ್ಷಗಳಷ್ಟು ಅಂದರೆ ಒಟ್ಟು ಆರು ಲಕ್ಷ ಖರ್ಚಿದೆ ಎನ್ನುತ್ತಾರೆ ರತ್ನಾಕರ್.

ಸವಾಲುಗಳಿವೆ

ಕಂಬಳ ಕೂಟದ ವೇಗ ಹೆಚ್ಚಿಸಲು ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಆದರೆ ಇದು ಹಲವು ಸವಾಲುಗಳನ್ನೂ ಎದುರಿಸುತ್ತಿದೆ. ಕಂಬಳದಲ್ಲಿ ಭಾಗವಹಿಸುವ ಕೆಲವು ಕೋಣಗಳು ಚಂಚಲ ಸ್ವಭಾವ ಹೊಂದಿರುತ್ತದೆ. ಅವುಗಳನ್ನು ಗಂತಿನಲ್ಲಿ ನಿಲ್ಲಿಸುವುದೇ ದೊಡ್ಡ ಸಮಸ್ಯೆ. ಈ ವ್ಯವಸ್ಥೆಯಲ್ಲಿ ಗೇಟ್ ತೆರೆಯುವ ಕ್ಷಣಕ್ಕೆ ಕೋಣಗಳನ್ನು ಹೇಗಾದರೂ ಮಾಡಿ ಅಣಿಗೊಳಿಸಲೇ ಬೇಕು. ಒಂದು ವೇಳೆ ಗೇಟ್ ತೆರೆದಾಗ ಕೋಣ ಸರಿಯಾದ ಸ್ಥಿತಿಯಲ್ಲಿ ಇರದಿದ್ದರೆ ಅದು ಓಟಕ್ಕೆ ಪರಿಣಾಮ ಬೀಳುತ್ತದೆ. ಕ್ಷಣ ಮಾತ್ರದಲ್ಲಿ ಫಲಿತಾಂಶ ನಿರ್ಧಾರವಾಗುವ ಸ್ಪರ್ಧೆಯಲ್ಲಿ ಇದೊಂದು ಪ್ರಮುಖ ಸವಾಲು.

ಇದಲ್ಲದೆ ಗೇಟ್ ತೆರೆಯುವ ವೇಳೆ ಕೋಣಗಳು ಮೂತ್ರ ಮಾಡುತ್ತಿದ್ದರೆ ಕೋಣಗಳನ್ನು ಓಡಿಸಲು ಸಾಧ್ಯವಿಲ್ಲ. ಇದೇ ವೇಳೆ ಗೇಟ್ ತೆರೆದರೆ ಏನು ಕತೆ ಎನ್ನುವುದು ಕೋಣಗಳ ಮಾಲಿಕರ ಕಳಕಳಿ.

ಫೋಟೋ ಫಿನಿಶ್ ತಂತ್ರಜ್ಞಾನ

ಸದ್ಯ ಕಂಬಳದಲ್ಲಿ ಸ್ಪರ್ಧೆಯ ಅಂತ್ಯಕ್ಕೆ ಬಳಸಲಾಗುತ್ತಿರುವ ಲೇಸರ್ ಫಿನಿಶಿಂಗ್ ಬದಲಿಗೆ ಕುದುರೆ ರೇಸ್ ನಲ್ಲಿ ಬಳಸುವಂತೆ ಫೋಟೋ ಫಿನಿಶ್ ತಂತ್ರಜ್ಞಾನ ಬಳಕೆಯು ಪ್ರಾಯೋಗಿಕ ರೀತಿಯಲ್ಲಿ ಐಕಳ ಕಂಬಳದಲ್ಲಿ ಜಾರಿಗೆ ಬರಲಿದೆ.

ಲೇಸರ್ ಫಿನಿಶಿಂಗ್ ನಲ್ಲಿ 1/100 ನಿಖರತೆಯಲ್ಲಿ ಫಲಿತಾಂಶ ನೀಡಲಾಗುತ್ತಿತ್ತು. ಎರಡು ಕರೆಯ ಕೋಣಗಳ ನಡುವಿನ ಓಟದ ವೇಗದ ಅಂತರ 0.03 ಗಿಂತ ಕಡಿಮೆಯಿದ್ದರೆ 0.00 ಬರುತ್ತಿತ್ತು ಅಂದರೆ ಎರಡೂ ಕರೆಯ ಓಟಗಳ ಸಮಯ ಸಮ- ಸಮ ಎಂದು ಬರುತ್ತಿತ್ತು. ಆದರೆ ಇದೀಗ ಫೋಟೋ ಫಿನಿಶಿಂಗ್ ತಂತ್ರಜ್ಞಾನದಲ್ಲಿ 1/100 ಬದಲಿಗೆ 1/1000 ನಿಖರತೆಯಲ್ಲಿ ಫಲಿತಾಂಶ ನೀಡಲಾಗುತ್ತದೆ. ಹೀಗಾಗಿ ಎರಡು ಓಟಗಳ ಅಂತರ 0.001 ರಷ್ಟು ಕಡಿಮೆಯಿದ್ದರೂ ಸ್ಪಷ್ಟ ಫಲಿತಾಂಶ ನೀಡಬಹುದು. ಹೀಗಾಗಿ ಈ ತಂತ್ರಜ್ಞಾನದಲ್ಲಿ ಓಟ ಸಮ-ಸಮ ಬರುವ ಅವಕಾಶ ತೀರಾ ಕಡಿಮೆ.

ಇದರೊಂದಿಗೆ ಫಿನಿಶಿಂಗ್ ಲೈನ್ ನಲ್ಲಿ ಕೋಣದ ಮೂಗಿನ ನೇರದಲ್ಲಿ ವರ್ಟಿಕಲ್ ಲೈನ್ ಕಾಣಿಸುವ ಚಿತ್ರವೂ ಸಿಗುತ್ತದೆ, ಅದರಲ್ಲಿ ಆ ಕೋಣಗಳ ಓಟದ ಟೈಮಿಂಗ್ ಕೂಡಾ ನಮೂದಿಸಲಾಗುತ್ತದೆ. ಇದು ಕೋಣಗಳನ್ನು ಮಾತ್ರ ಟ್ರ್ಯಾಕ್ ಮಾಡುತ್ತದೆ. ಕರೆಯ ಬಳಿಯ ಯಾವುದೇ ಇತರ ಅಂಶ ಇದಕ್ಕೆ ಅಡ್ಡಿ ಪಡಿಸುವುದಿಲ್ಲ. ಫಿನಿಶಿಂಗ್ ಫೋಟೋವನ್ನು ನೇರ ಪ್ರಸಾರಕ್ಕೂ ಒದಗಿಸಬಹುದು.

ನಿಶಾನೆಗೂ ಹೊಸ ವ್ಯವಸ್ಥೆ

ಕನೆಹಲಗೆ ವಿಭಾಗದಲ್ಲಿ 6.5 ಕೋಲು ಮತ್ತು 7.5 ಕೋಲು ಎತ್ತರದ ನಿಶಾನೆಗೆ ನೀರು ಹಾರಿಸಿದ ಕೋಣಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸದ್ಯ ನಿಶಾನೆಗೆ ನೀರು ತಾಗಿದ ತೀರ್ಪನ್ನು ಮನುಷ್ಯರೇ ನೋಡಿ ತೀರ್ಮಾನಿಸುತ್ತಾರೆ. ಇದಕ್ಕೂ ಹೊಸ ವ್ಯವಸ್ಥೆ ಮಾಡಲಾಗುತ್ತಿದೆ. ನಿಶಾನೆಗೆ ಬಳಸುವ ಬಟ್ಟೆಗೆ ಕೆಮಿಕಲ್ ಡೋಪಿಂಗ್ ಮಾಡಿ ಅದಕ್ಕೆ ನೀರು ಬಿದ್ದಾಕ್ಷಣ ಆ ಜಾಗದಲ್ಲಿ ಬಣ್ಣ ಬದಲಾಗುತ್ತದೆ. ಇದರಿಂದ ಸುಲಭವಾಗಿ ತೀರ್ಪು ನೀಡಬಹುದು. ಮುಂದಿನ ಸೀಸನ್ ನಿಂದ ಈ ವ್ಯವಸ್ಥೆ ಜಾರಿಗೆ ಬರಬಹುದು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next