Advertisement

2 ವರ್ಷದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿ ಪೂರ್ಣ

09:40 PM Jan 08, 2020 | Lakshmi GovindaRaj |

ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ಬಸ್‌ನಿಲ್ದಾಣ ಹೈಟೆಕ್‌ ಬಸ್‌ನಿಲ್ದಾಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಬಸ್‌ನಿಲ್ದಾಣ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದ್ದು, ಸಂಚಾರ ವ್ಯವಸ್ಥೆಗೆ ಸಾರ್ವಜನಿಕರು ಹೊಂದಿಕೊಂಡು ಸಹಕರಿಸಬೇಕೆಂದು ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಮನವಿ ಮಾಡಿದರು.

Advertisement

ನಗರದ ಬಸವೇಶ್ವರ ರಸ್ತೆಯಲ್ಲಿರುವ ನಿಗಮದ ಘಟಕ-1ರ ಸ್ಥಳಕ್ಕೆ ಕಾರ್ಯಾಚರಣೆ ಮಾಡಲಿರುವ ತಾತ್ಕಾಲಿಕ ಬಸ್‌ ನಿಲ್ದಾಣಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಅಶೋಕ ರಸ್ತೆಯಲ್ಲಿರುವ ಹಳೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಭಾಗದಲ್ಲಿ ನೂತನ ಅತ್ಯಾಧುನಿಕ ಬಸ್‌ನಿಲ್ದಾಣ ನಿರ್ಮಿಸಲು ಸುಮಾರು 82 ಕೋಟಿ ರೂ. ಕಾಮಗಾರಿ ಪ್ರಾರಂಭಿಸಲಾಗಿದ್ದು, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಆದ್ದರಿಂದ, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಅಗತ್ಯ ಮೂಲಸೌಲಭ್ಯ: ಬಸ್‌ನಿಲ್ದಾಣದ ಪರ್ಯಾಯ ವ್ಯವಸ್ಥೆ ಬಸವೇಶ್ವರ ರಸ್ತೆಯಲ್ಲಿರುವ ನಿಗಮದ ಘಟಕ-1ರ ಸ್ಥಳಕ್ಕೆ ಸ್ಥಳಾಂತರಗೊಳಿಸಿದ್ದು, ಪ್ರಯಾಣಿಕರಿಗೆ ಯಾವುದೇ ವ್ಯತ್ಯಯವಾಗದಂತೆ ವಿಶಾಲವಾಗಿರುವ ತಾತ್ಕಾಲಿಕವಾಗಿ ಬಸ್‌ ನಿಲ್ದಾಣದಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ ಎಂದ‌ು ಹೇಳಿದರು.

ತಾತ್ಕಾಲಿಕ ಬಸ್‌ ನಿಲ್ದಾಣದ ಸ್ಥಳಾಂತರದ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ಪತ್ರಿಕೆಗಳ ಮೂಲಕ ತಿಳಿಸಲಾಗಿದ್ದು, ಅದಾಗ್ಯೂ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಇಂದು ಅನೌಪಚಾರಿಕವಾಗಿ ಉದ್ಘಾಟನೆ ಹಮ್ಮಿಕೊಳ್ಳಲಾಗಿತ್ತು. ಈ ಘಟಕದಿಂದ ತುಮಕೂರು-ತಿರುಪತಿ, ತುಮಕೂರು-ಮಧುರೈ, ತುಮಕೂರು-ತಿಪಟೂರು, ಹೊಸದುರ್ಗ-ಬೆಂಗಳೂರು ಮಾರ್ಗವಾಗಿ ಚಲಿಸುವ 4 ಹೊಸ ಬಸ್‌ಗೂ ಚಾಲನೆ ನೀಡಲಾಗಿದೆ ಎಂದರು.

ತಾತ್ಕಾಲಿಕ ಬಸ್‌ ನಿಲ್ದಾಣದಿಂದ ಹೊರಡುವ ವಾಹನಗಳ ಸಂಚಾರ ದಟ್ಟಣೆ ತಪ್ಪಿಸುವ ಸಲುವಾಗಿ ವಾಹನ ಸಂಚಾರದಲ್ಲೂ ಬದಲಾವಣೆ ಆಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು. ಪಾಲಿಕೆ ಮೇಯರ್‌ ಲಲಿತ ರವೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೋ.ನ.ವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ.ಭೂಬಾಲನ್‌, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್‌, ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ‌ ಅಧಿಕಾರಿಗಳು, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

ಸಾಂಕೇತಿಕ ಸಂಚಾರ: ತುಮಕೂರಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಕಾಮಗಾರಿ ಪ್ರಾರಂಭ ಹಿನ್ನೆಲೆಯಲ್ಲಿ ಬಸವೇಶ್ವರ ರಸ್ತೆಯಲ್ಲಿರುವ ನಿಗಮದ ಘಟಕ-1ಕ್ಕೆ ಸ್ಥಳಾಂತರಿಸಿರುವ ತಾತ್ಕಾಲಿಕ ಬಸ್‌ ನಿಲ್ದಾಣಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರಿ ಬಸ್‌ ಹತ್ತಿ ನಗರದಲ್ಲಿ ಸಾಂಕೇತಿಕ ಸಂಚಾರ ಮಾಡಿದರು.

4 ಹೊಸ ಬಸ್‌ ಮಾರ್ಗ: ತುಮಕೂರಿನಿಂದ 4 ಹೊಸ ಬಸ್‌ ಮಾರ್ಗಗಳಿಗೆ ಶಾಸಕ ಜಿ.ಬಿ ಜ್ಯೋತಿಗಣೇಶ್‌ ಹಸಿರು ನಿಶಾನೆ ತೋರಿದರು. ತುಮಕೂರು-ತಿರುಪತಿ, ತುಮಕೂರು-ಮಧುರೈ, ತುಮಕೂರು-ತಿಪಟೂರು, ಹೊಸದುರ್ಗ-ಬೆಂಗಳೂರು ಮಾರ್ಗವಾಗಿ ಚಲಿಸುವ ನೂತನ ಬಸ್‌ಗಳು ಬುಧವಾರದಿಂದಲೇ ಕಾರ್ಯಾರಂಭ ಮಾಡಿದ್ದು, ತಿರುಪತಿ ಮತ್ತು ಮಧುರೈಗೆ ತುಮಕೂರಿನಿಂದ ಪ್ರಯಾಣಿಕರು ಸಂಚರಿಸಲು ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next