ಹೊಸದಿಲ್ಲಿ: ಬೆಂಗಳೂರು-ಮಂಗಳೂರು ಮಧ್ಯೆ ಹೆದ್ದಾರಿಯೇನೋ ಇದೆ. ಆದರೆ ಪ್ರಯಾಣಕ್ಕೆ 8 ಗಂಟೆ ತಗಲುತ್ತದೆ. ಇನ್ನು ನಾಲ್ಕು ವರ್ಷಗಳಲ್ಲಿ ಅಂಥ ತಲೆನೋವೇ ಇರದು. ಆಜುಬಾಜು ನಾಲ್ಕು ಗಂಟೆಗಳಲ್ಲಿ ಬೆಂಗಳೂರನ್ನು ತಲುಪುವಂಥ ಉತ್ಕೃಷ್ಟ ಮಟ್ಟದ ಹೆದ್ದಾರಿ ನಿರ್ಮಾಣವಾಗಲಿದೆ. ಅಂತಾರಾಷ್ಟ್ರೀಯ ದರ್ಜೆಯ ಈ ರಸ್ತೆಗಳಲ್ಲಿ ಸುಖಾಸುಮ್ಮನೆ ಯು ಟರ್ನ್, ಬದಿಯಿಂದ ಪ್ರವೇಶಕ್ಕೆ ಅವಕಾಶವೂ ಇಲ್ಲ. ಸರಕು, ವೇಗದ ವಾಹನಗಳಿಗೆ ಪ್ರತ್ಯೇಕ ಲೇನ್ ಕೂಡ ಇರಲಿದೆ. ಇಂಥದ್ದೊಂದು ಹೊಸ ತಲೆಮಾರಿನ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಜತೆಗೆ ದೇಶಾದ್ಯಂತ 20 ಸಾವಿರ ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಿದೆ. ಅದಕ್ಕಾಗಿ ಭಾರತ್ ಮಾಲಾ ಯೋಜನೆಯ ಒಂದನೇ ಹಂತದ ಯೋಜನೆಯಡಿಯಲ್ಲೇ ಈ ರಸ್ತೆಗಳೂ ನಿರ್ಮಾಣವಾಗಲಿದ್ದು, 3.8 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಮುಂದಿನ 5 ವರ್ಷದೊಳಗೆ ಈ ಯೋಜನೆ ಸಾಕಾರಗೊಳ್ಳಲಿದೆ.
ನಾಲ್ಕು ಹೆದ್ದಾರಿಗಳ ಆಯ್ಕೆ: ಹೈಸ್ಪೀಡ್ ಹೆದ್ದಾರಿಗಳ ನಿರ್ಮಾಣದಲ್ಲಿ ಮೊದಲನೇ ಹಂತಕ್ಕೆ ನಾಲ್ಕು ಹೆದ್ದಾರಿಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಮಂಗಳೂರು -ಬೆಂಗಳೂರು, ಮುಂಬಯಿ- ಕೋಲ್ಕತಾ, ಲೂಧಿಯಾನಾ – ಕಾಂಡ್ಲಾ, ಪೋರಬಂದರ್-ಸಿಲ್ಚಾರ್ ರಸ್ತೆ ಇರಲಿವೆ. ಪ್ರಮುಖ ಆರ್ಥಿಕ ಚಟುವಟಿಕೆ ನಡೆಯುವ, ಬಂದರು ಸಂಪರ್ಕ, ಉತ್ಪಾದನಾ ಕ್ಷೇತ್ರಗಳು, ಪ್ರಮುಖ ವ್ಯಾಪಾರ ಕೇಂದ್ರಗಳಿರುವ ನಗರಗಳನ್ನು ಇವುಗಳು ಬೆಸೆಯಲಿವೆ.
ಅಡೆತಡೆ ಇಲ್ಲದ ಹೆದ್ದಾರಿ: ರಿಕ್ಷಾ, ಸೈಕಲ್, ಸ್ಥಳೀಯ ಬೈಕ್ ಸವಾರರು ಈಗಿನ ರಸ್ತೆಗಳಲ್ಲಿ ಅಡ್ಡ ಬರುವುದು ಸಾಮಾನ್ಯ. ಆದರೆ ಕೇಂದ್ರದ ಉದ್ದೇಶಿತ ಹೈಸ್ಪೀಡ್ ಹೆದ್ದಾರಿಗಳಲ್ಲಿ ಇಂಥ ಯಾವುದೇ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಗೆ ಅವಕಾಶವಿಲ್ಲ. ಇದಕ್ಕೆ ಪ್ರತ್ಯೇಕ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಕನಿಷ್ಠ 4 ಪಥದ ರಸ್ತೆಗಳು ಇರಲಿದ್ದು, ಈಗಿರುವ ರಸ್ತೆಗಳನ್ನೇ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಜತೆಗೆ ಈಗಿನ ರಸ್ತೆಗಳಿಗೆ ಸುಧಾರಿತ ಸರ್ವೀಸ್ ರಸ್ತೆಗಳನ್ನು ನೀಡಲಾಗುತ್ತದೆ. ಇದರಿಂದ ಪ್ರತ್ಯೇಕ ಹೆದ್ದಾರಿ ನಿರ್ಮಾಣದ ಅಗತ್ಯ ಇರುವುದಿಲ್ಲ. 12 ಸಾವಿರ ಕಿ.ಮೀ. ರಸ್ತೆ ವರದಿ ಸಿದ್ಧ: ಈಗಾಗಲೇ ಸಚಿವಾಲಯ 12 ಸಾವಿರ ಕಿ.ಮೀ. ಹೈಸ್ಪೀಡ್ ಹೆದ್ದಾರಿಗಳ ಅಭಿವೃದ್ಧಿಯ ಕುರಿತ ವರದಿ ತಯಾರಿಸಿದೆ. ಸದ್ಯ ದೇಶದ 60 ಸಾವಿರ ಕಿ.ಮೀ.ಗಳಷ್ಟು ರಾ. ಹೆದ್ದಾರಿಗಳಲ್ಲಿ ಶೇ. 80 ಸರಕು ಸಾಗಣೆ ನಡೆಯುತ್ತದೆ.