ಬೆಂಗಳೂರು: ಕೃಷ್ಣ ರಾಜೇಂದ್ರ ಮಾರುಕಟ್ಟೆ (ಕೆ.ಆರ್.ಮಾರುಕಟ್ಟೆ)ಯಲ್ಲಿರುವ ಅಕ್ರಮ ಮಳಿಗೆಗಳನ್ನು ತೆರವುಗೊಳಿಸಿ, ಅಲ್ಲಿ ಅಗ್ನಿಶಾಮಕ ಸುರಕ್ಷತೆಗೆ ಕ್ರಮ ಕೈಗೊಳ್ಳುವ ಕುರಿತು ನ್ಯಾಯಾಲ ಯದ ಆದೇಶ ಪಾಲನೆ ಮಾಡದ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಈ ಕಣ್ಣಾಮುಚ್ಚಾಲೆ ಮತ್ತು ಕಣ್ಣೊರೆಸುವ ತಂತ್ರ ಒಪ್ಪಲು ಸಾಧ್ಯವಿಲ್ಲ.
ಹೈಕೋರ್ಟ್ ಆದೇಶ ಪಾಲನೆ ಬಗ್ಗೆ ಜ.30ರೊಳಗೆ ಪಾಲಿಕೆ ಆಯುಕ್ತರೇ ಖುದ್ದು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಖಡಕ್ ಆಗಿ ಹೇಳಿದೆ. ಈ ಕುರಿತಂತೆ ಕೆ.ಆರ್.ಮಾರುಕಟ್ಟೆ ಹೂವಿನ ವರ್ತಕರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಪಾಲಿಕೆ ಧೋರಣೆಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಪ್ರತಿದಿನ ಸಾವಿರಾರು ಜನರು ಭೇಟಿ ನೀಡುವ ಮಾರುಕಟ್ಟೆಯಲ್ಲಿ ಅಗ್ನಿ ಶಾಮಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಪಾಲಿಕೆ ಸುಮ್ಮನೆ “ಕಣ್ಣೊರೆಸುವ’ ತಂತ್ರ ಅನುಸರಿಸುತ್ತಿದೆ. ಜ.30ರೊಳಗೆ ಪಾಲಿಕೆ ಆಯುಕ್ತರೇ ಖುದ್ದು ಪ್ರಮಾಣ ಪತ್ರ ಸಲ್ಲಿಸಬೇಕು. ಇನ್ನು ಮುಖ್ಯ ನ್ಯಾಯಮೂರ್ತಿ, ಅಕ್ರಮ ಅಂಗಡಿ ತೆರೆಯಲು ಟೆಂಡರ್ ಕರೆದಿದೆಯೇ? ಪಾಲಿಕೆ ಯಿಂದ ಆ ಕೆಲಸ ಸಾಧ್ಯವಿಲ್ಲವೇ? ರಸ್ತೆ ಹಾಗೂ ಪಾದಚಾರಿ ಒತ್ತುವರಿ ಮಾರ್ಗ ತೆರವುಗೊಳಿಸಲು ಸಾಧ್ಯವಿಲ್ಲವೇ ಎಂದು ಕೇಳಿದರು.
ಕಣ್ಣಾಮುಚ್ಚಾಲೆ ಸಹಿಸಲ್ಲ – ಸಿಜೆ: “ಕೋರ್ಟ್ ಬಿಬಿಎಂಪಿಯನ್ನು ನಡೆಸಲು ಸಾಧ್ಯವಿಲ್ಲ. ನಕ್ಷೆ ನಾಪತ್ತೆ ನಿಜಕ್ಕೂ ಅಚ್ಚರಿ ತಂದಿದೆ. 1995ರ ಅನುಪಾಸಿನಲ್ಲಿ ನಿರ್ಮಿಸಿರುವ ಕಟ್ಟಡದ ನಕ್ಷೆ ಇಲ್ಲ ಎನ್ನುತ್ತೀರಿ, ಹಾಗೆಂದರೆ ಏನರ್ಥ? 2013ರಲ್ಲಿ ಇದ್ದ ನಕ್ಷೆ , 2016ರಲ್ಲಿ ಎಲ್ಲಿಗೆ ಹೋಯಿತು?. ಇದೇ ಮೊದಲಲ್ಲ ಹಲವು ಪ್ರಕರಣಗಳಲ್ಲಿ ಪಾಲಿಕೆ ಹೀಗೆಯೇ ಕಡತ ನಾಪತ್ತೆ ಎಂದು ಹೇಳುತ್ತಿದೆ. ಬಿಬಿಎಂಪಿಯ ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ್ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ನಕ್ಷೆ ನಾಪತ್ತೆ ಎಂದು ತಿಳಿಸಿದ್ದಾರೆ.
ಅವರು ಆಯುಕ್ತರಿಗೆ ನೇರ ನಕ್ಷೆ ನಾಪತ್ತೆ ಆಗಿರುವ ವಿಷಯ ತಿಳಿಸಬಹುದಿತ್ತು. ಆದರೆ ಆ ಕೆಲಸ ಮಾಡಿಲ್ಲ. ಪ್ರಮಾಣಪತ್ರ ನೋಡಿದರೆ ಗಾಬರಿ ಆಗುತ್ತದೆ. ಅ.8ರಂದು ಮಾರುಕಟ್ಟೆಗೆ ಭೇಟಿ ನೀಡಿದ್ದ ಆಗ್ನಿ ಶಾಮಕ ದಳ, ಕೆಲವೊಂದು ದೋಷ ಪಟ್ಟಿ ಮಾಡಿ ಸರಿಪಡಿಸದಿದ್ದರೆ ಅಗ್ನಿ ಅಪಾಯವಿದೆ ಎಂದು ಹೇಳಿತ್ತು. ಆದರೆ, ಪಾಲಿಕೆ ಮಾರುಕಟೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವಿಗೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಹೊಸದಾಗಿ ಅಫಿಡವಿಟ್ ಸಲ್ಲಿಸುವಂತೆ ಆಯುಕ್ತರಿಗೆ ತಾಕೀತು ಮಾಡಿತು.