ಬಂಟ್ವಾಳ: ಹಿಂದೂ ಮುಖಂಡರ ಹತ್ಯೆಗೆ ಸಂಚು ಆರೋಪದಲ್ಲಿ ಕಾಸರಗೋಡಿನ ಓರ್ವನನ್ನು ದಿಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದಿರುವ ಬೆನ್ನಲ್ಲೇ ಮುಖಂಡರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆರ್‌ಎಸ್‌ಎಸ್ ನೇತಾರ ಡಾ| ಕಲ್ಲಡ್ಕ ಪ್ರಭಾಕರ ಭಟ್ ಅವರ ಭದ್ರತೆಗೆ ಈವರೆಗೆ ಓರ್ವ ಗನ್‌ಮ್ಯಾನ್ ಇದ್ದರೆ ಇದೀಗ ಮೂರಕ್ಕೇರಿಸಲಾಗಿದೆ.
ಪ್ರಭಾಕರ ಭಟ್ ಅವರನ್ನು ಜ. 10ರಂದೇ ಬಿಗಿ ಭದ್ರತೆಯಲ್ಲಿ ಬೆಂಗಳೂರಿನ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಜ. 14ರಂದು ಕಲ್ಲಡ್ಕದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಟ್ ಅವರು ಪಾಲ್ಗೊಂಡಿದ್ದು ಕಾರ್ಯಕ್ರಮ ಮುಗಿದ ಕೂಡಲೇ ಬೆಂಗಳೂರಿಗೆ ಮರಳಿದ್ದಾರೆ. ಬಜಪೆಯ ವಿಮಾನ ನಿಲ್ದಾಣದಿಂದ ಹೋಗಿ ಬರುವ ದಾರಿಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಯಾವುದೇ ವಾಹನ ಭಟ್ ಅವರಿದ್ದ ವಾಹನವನ್ನು ಹಿಂದಿಕ್ಕದಂತೆ ಪೊಲೀಸರು ನೋಡಿಕೊಂಡಿದ್ದರು.
ಧರ್ಮಕ್ಕೆ ಚ್ಯುತಿ ತರುವ, ಅನ್ಯಾಯ ಮಾಡುವ ಯಾವುದೇ ವ್ಯಕ್ತಿಯ ವಿರುದ್ಧ ಮಾತ್ರ ನನ್ನ ಅಕ್ಷೇಪ. ಹಿಂದೂಗಳನ್ನು ಎಚ್ಚರಿಸುವುದು ನನ್ನ ಕರ್ತವ್ಯ; ಮುಂದೆಯೂ ಅದನ್ನು ಮಾಡುತ್ತೇನೆ. ಸಮಾಜ ಕಂಟಕರಿಗೆ ಹೆದರಿ ಕರ್ತವ್ಯದಿಂದ ವಿಮುಖನಾಗಲಾರೆ ಎಂದು ಭಟ್ ಅವರು ಉದಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜೀವ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಗಂಭೀರ ಕ್ರಮ ಕೈಗೊಂಡಿದ್ದಾರೆ. ನಾನೀಗ ಬೆಂಗಳೂರಿನಲ್ಲಿ ಪೊಲೀಸ್ ಸುಪರ್ದಿಯಲ್ಲಿ ಇದ್ದೇನೆ. ಮೊದಲು ಓರ್ವ ಗನ್‌ಮ್ಯಾನ್ ಇದ್ದರೆ ಜ. 10ರಿಂದ ಸರಕಾರ ಮೂವರು ಗನ್‌ಮ್ಯಾನ್‌ಗಳನ್ನು ಒದಗಿಸಿದೆ. ಮನೆ ಕಾಂಪೌಂಡ್ ಸುತ್ತಲೂ ಶಸ್ತ್ರಸಜ್ಜಿತ ಪೊಲೀಸರ ಕಾವಲು ಇದೆ. ಕಲ್ಲಡ್ಕದ ನಮ್ಮ ಮನೆಗೂ ಪೊಲೀಸರು ಪಹರೆ ನೀಡಿದ್ದಾರೆ. ಮುಂದಕ್ಕೆ ಏನೆಂಬುದು ನಿರ್ಧಾರ ಆಗಿಲ್ಲ.
ಡಾ| ಪ್ರಭಾಕರ ಭಟ್