Advertisement

ಸಂಕ್ರಾಂತಿ ಬಳಿಕ ಪ್ರೌಢಶಾಲೆ? ಶೈಕ್ಷಣಿಕ ವರ್ಷ ಆಗಸ್ಟ್‌ ವರೆಗೆ ವಿಸ್ತರಣೆ ಸಾಧ್ಯತೆ

12:21 AM Nov 24, 2020 | sudhir |

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷವನ್ನು 2021ರ ಆಗಸ್ಟ್‌ ಮಧ್ಯದವರೆಗೂ ವಿಸ್ತರಿಸಲು ರಾಜ್ಯ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

Advertisement

ಶಾಲೆ ಮತ್ತು ಪಿಯುಸಿ ಕಾಲೇಜು ಆರಂಭಕ್ಕೆ ಸಂಬಂಧಿಸಿ ಡಿಸೆಂಬರ್‌ ಮೂರನೇ ವಾರದಲ್ಲಿ ನಿರ್ಧಾರ ತೆಗೆದುಕೊಳ್ಳಲುವ ಸಾಧ್ಯತೆಯಿದೆ. ಕೋವಿಡ್‌ ನಿರ್ವಹಣೆ ಸಂಬಂಧ ಸರಕಾರ ರಚಿಸಿರುವ ತಜ್ಞರ ಸಲಹಾ ಸಮಿತಿಯ ಶಿಫಾರಸಿನಂತೆ ಜನವರಿ ಮೊದಲ ವಾರ ಅಥವಾ ಸಂಕ್ರಾಂತಿ ಬಳಿಕ ಪ್ರೌಢಶಾಲೆ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸುವುದು ಹಾಗೂ ಶೈಕ್ಷಣಿಕ ವರ್ಷದ ವಿಸ್ತರಣೆಗೆ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

2019-20ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು ಜೂನ್‌ ಅಂತ್ಯ ಹಾಗೂ ಜುಲೈ ಮೊದಲ ವಾರದಲ್ಲಿ ಮತ್ತು ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆಯನ್ನು ಜೂನ್‌ 18ರಂದು ನಡೆಸಲಾಗಿತ್ತು. ಇದನ್ನೇ ಮಾನದಂಡವಾಗಿಟ್ಟುಕೊಂಡು ಹಾಲಿ ಶೈಕ್ಷಣಿಕ ವರ್ಷವನ್ನು ವಿಸ್ತರಿಸಬಹುದು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.

ಆರು ತಿಂಗಳ ಕಾಲಾವಕಾಶ
ಶಿಕ್ಷಣ ಇಲಾಖೆಯ ಸದ್ಯದ ಚಿಂತನೆಯಂತೆ ಜನವರಿ ಎರಡನೇ ವಾರದಿಂದ ಪ್ರೌಢಶಾಲೆ, ಪಿಯು ತರಗತಿ ಆರಂಭಿಸಿದರೆ, ಜುಲೈ ಅಂತ್ಯದ ವರೆಗೂ ವಿಸ್ತರಿಸಿ, ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆಗೆ ಸಜ್ಜುಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ ನಡೆಯುತ್ತಿದೆ. ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಚಂದನದ ಮೂಲಕ ನಡೆಯುತ್ತಿರುವ ಸಂವೇದಾ ತರಗತಿ ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ.

ಸಂವೇದಾದಲ್ಲಿ ವಿದ್ಯಾರ್ಥಿಗಳು ಕಲಿತಿರುವ ವಿಷಯ ಹಾಗೂ ಮುಂದೆ ಕಲಿಯಬೇಕಿರುವ ವಿಷಯಗಳ ಆಧಾರದಲ್ಲಿ ಪಠ್ಯ ಕಡಿತದ ಮಾಹಿತಿಯನ್ನು ಸರಕಾರ ಬಿಡುಗಡೆ ಮಾಡಲಿದೆ. ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕವನ್ನು ಡಿಸೆಂಬರ್‌ನಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.

Advertisement

ಸಿಇಟಿ, ಕೌನ್ಸೆಲಿಂಗ್‌ ವಿಳಂಬ ಸಾಧ್ಯತೆ
2020-21ನೇ ಶೈಕ್ಷಣಿಕ ವರ್ಷ ಆಗಸ್ಟ್‌ ವರೆಗೂ ವಿಸ್ತರಣೆಯಾದರೆ, ಎಂಜಿನಿಯರಿಂಗ್‌ ಮೊದಲಾದ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಕೌನ್ಸೆಲಿಂಗ್‌ ಪ್ರಕ್ರಿಯೆ ಕೂಡ ವಿಳಂಬವಾಗುವ ಸಾಧ್ಯತೆಯಿದೆ. 2020-21ನೇ ಸಾಲಿನ ಕೌನ್ಸೆಲಿಂಗ್‌ ಪ್ರಕ್ರಿಯೆ ಕೂಡ ಈಗಾಗಲೇ ವಿಳಂಬವಾಗಿ ಆರಂಭವಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್‌ ಕೊನೆಯ ವೇಳೆಗೆ ಸಂವೇದಾ ಮೂಲಕ ಎಸೆಸೆಲ್ಸಿ ಪಠ್ಯಕ್ರಮ ಪೂರ್ಣವಾ ಗಲಿದೆ. ಆದರೆ, ಸಂವೇದಾ ಪಾಠವೇ ಪರಿಪೂರ್ಣವಲ್ಲ. 2019-20ನೇ ಸಾಲಿನಲ್ಲೂ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವಿಳಂಬವಾಗಿತ್ತು. ಅದರಂತೆ ಪ್ರಸಕ್ತ ಸಾಲಿನ ಎರಡು ವಾರ್ಷಿಕ ಪರೀಕ್ಷೆಯ ದಿನಾಂಕದ ಬಗ್ಗೆ ಚಿಂತನೆ ನಡೆಸಿ ನಿರ್ಧರಿಸಲಿದ್ದೇವೆ.
-ಸುರೇಶ್‌ ಕುಮಾರ್‌, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next