ವಾಡಿ: ಪ್ರೌಢಶಾಲೆ ಶಿಕ್ಷಣ ಪಡೆಯಲು ಪ್ರತಿನಿತ್ಯ ತುಂಬಿದ ಆಟೋ ಹತ್ತಿ ಪಕ್ಕದ ಗ್ರಾಮಕ್ಕೆ ಪ್ರಯಾಣ ಬೆಳೆಸಬೇಕಾದ ದುಸ್ಥಿತಿ ಎದುರಿಸುತ್ತಿದ್ದ ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದ ಬಡ ವಿದ್ಯಾರ್ಥಿಗಳ ಗೋಳಾಟದ ಕೂಗಿಗೆ ಶಿಕ್ಷಣ ಇಲಾಖೆ ಕೊನೆಗೂ ಕಿವಿಗೊಟ್ಟಿದ್ದು, ಬುಧವಾರ (ಸೆ.7)ದಿಂದ ತರಗತಿಗಳು ಆರಂಭವಾಗಿದ್ದು, ಮಕ್ಕಳು ಹರ್ಷ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಇಷ್ಟು ವರ್ಷ ಎಂಟನೇ ತರಗತಿ ನಡೆಯುತ್ತಿತ್ತು. ಒಂಭತ್ತು ಮತ್ತು ಹತ್ತನೇ ತರಗತಿಗಾಗಿ ಮಕ್ಕಳು ಪಕ್ಕದ ನಾಲವಾರ ಅಥವಾ ವಾಡಿ ನಗರಕ್ಕೆ ಬರಬೇಕಿತ್ತು. ಆಟೋಗಳನ್ನು ತಿಂಗಳ ಬಾಡಿಗೆಗೆ ಪಡೆದು ಪೋಷಕರು ಮಕ್ಕಳಿಗೆ ಪ್ರೌಢ ಶಿಕ್ಷಣ ಕೊಡಿಸುತ್ತಿದ್ದರು. ದೂರದ ಗ್ರಾಮಗಳಿಗೆ ಹೋಗಿ ಬರಲಾಗದೆ ಅನೇಕ ಬಾಲಕಿಯರು ಪ್ರಾಥಮಿಕ ಶಿಕ್ಷಣಕ್ಕೆ ತಿಲಾಂಜಲಿ ಹಾಡುತ್ತಿದ್ದರು. ಇದು ಪೋಷಕರಿಗೆ ತಲೆನೋವಾಗಿತ್ತು.
ಶಿಕ್ಷಣ ಕಾಳಜಿ ಮೆರೆದ ಎಸ್ಡಿಎಂಸಿ ಅಧ್ಯಕ್ಷ: ಕೊಂಚೂರು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮಾತ್ರ ದೊರಕುತ್ತಿತ್ತು. ಮಕ್ಕಳು ಪ್ರೌಢ ಶಿಕ್ಷಣಕ್ಕಾಗಿ ದೂರದ ಗ್ರಾಮಗಳಿಗೆ ಪ್ರಯಾಣ ಬೆಳೆಸಿ ತೊಂದರೆ ಅನುಭವಿಸುತ್ತಿದ್ದ ಪ್ರಸಂಗವನ್ನು ಕಂಡು ಮರುಗಿದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನರಸಿಂಗ್ ತಂಬಾಕೆ, ಇತ್ತೀಚೆಗೆ ಕೊಂಚೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಜಿಲ್ಲಾಧಿಕಾರಿ ಯಶವಂತ ಗುರಿಕಾರ ಅವರಿಗೆ ಮನವಿ ಪತ್ರ ಕೊಟ್ಟು ಪ್ರೌಢ ಶಾಲೆ ಮಂಜೂರಿಗೆ ಮನವಿ ಮಾಡಿದ್ದರು.
ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೂ ವಿಷಯ ತಿಳಿಸಿ ಮಕ್ಕಳ ಪರದಾಟ ವಿವರಿಸಿದ್ದರು. ಪರಿಣಾಮ 2022ರ ಸಾಲಿನಿಂದ ಕೊಂಚೂರಿಗೆ ಪ್ರೌಢ ಶಾಲೆ ಮಂಜೂರಾಗಿದ್ದು, ನಾಲವಾರ ಪ್ರೌಢ ಶಾಲೆಗೆ ದಾಖಲೆ ಪಡೆದಿದ್ದ ಮಕ್ಕಳು ಪುನಃ ಕೊಂಚೂರಿನ ಶಾಲೆಗೆ ಪ್ರವೇಶ ಪಡೆದಿದ್ದಾರೆಅಗತ್ಯ ಶಿಕ್ಷಕರ ನೇಮಕಕ್ಕೆ ಒತ್ತಾಯ ಪ್ರೌಢ ಶಾಲೆ ಮಂಜೂರಾಗಿ ತರಗತಿಗಳು ಪ್ರಾರಂಭವಾಗಿರುವ ಸಂತಸ ಒಂದೆಡೆಯಾದರೆ, ಪಾಠಗಳಿಗೆ ಶಿಕ್ಷಕರ ಕೊರತೆ ಎದುರಾಗಿರುವ ನೋವು ಮತ್ತೂಂದೆಡೆ ಕಾಡುತ್ತಿದೆ.
ನಮ್ಮೂರಲ್ಲೇ ಪ್ರೌಢ ಶಿಕ್ಷಣ ಲಭ್ಯವಿದೆ ಎನ್ನುವ ಕಾರಣಕ್ಕೆ ನಾಲವಾರ ಶಾಲೆಯಿಂದ ವರ್ಗಾವಣೆ ಪತ್ರ ತಂದು ದಾಖಲಾದ ಒಂಭತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೋಧಕ ಸಿಬ್ಬಂದಿ ಕೊರತೆ ಎದುರಾಗಿದೆ. ಪ್ರಾಥಮಿಕ ಶಾಲೆ ಶಿಕ್ಷಕರನ್ನೇ ಪ್ರೌಢ ಶಿಕ್ಷಣ ನೀಡಲು ಬಳಸಿಕೊಳ್ಳಲಾಗುತ್ತಿದ್ದು, ಇರುವ ಇಬ್ಬರು ಶಿಕ್ಷಕರಿಂದ ಪಾಠಪ್ರವಚನ ಸರಿಯಾಗಿ ನಡೆಯುತ್ತಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ನರಸಿಂಗ್ ಆರೋಪಿಸಿದ್ದಾರೆ. ಮಕ್ಕಳ ಶಿಕ್ಷಣ ಭವಿಷ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದ್ದು, ಕೂಡಲೇ ಪ್ರೌಢ ಶಾಲೆಗೆ ಅಗತ್ಯ ಶಿಕ್ಷಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.