Advertisement
ಕೊಂಕಣಿ ಮಾನ್ಯತಾ ದಿನಾಚರಣೆ ಅಂಗವಾಗಿ ರವಿವಾರ ಕೊಡಿಯಾಲ್‌ಬೈಲ್‌ನ ಟಿ.ವಿ.ರಮಣ್ ಪೈ ಹಾಲ್‌ನಲ್ಲಿ ನಡೆದ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
Related Articles
ಕೊಂಕಣಿ ಜನರು ಜಾಗತಿಕವಾಗಿ ಮೇಲುಗೈ ಸಾಧಿಸಿದ ಹಾಗೂ ಗೌರವಾನ್ವಿತ ಸಮುದಾಯ ಆಗಬೇಕು. ಕೊಂಕಣಿ ಜನರಲ್ಲಿ ಯಾರೂ ಬಡತನದಲ್ಲಿ ಇರಬಾರದು. ಈ ಮೂಲಕ ಭಾರತೀಯರ ಬಡತನ ನಿವಾರಣೆಗೆ ಮಹತ್ತರ ಕೊಡುಗೆ ಸಲ್ಲಿಸ ಬೇಕು. ತಾನು ಕೊಂಕಣಿ ಜನ ಎಂದು ಹೇಳಲು ಪ್ರತಿಯೊಬ್ಬ ಕೊಂಕಣಿಗ ಹೆಮ್ಮೆ ಪಡಬೇಕು ಎಂದರು. ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಸ್ವೀಕರಿಸುವ ಮೂಲಕ ನಮಗೆ ಗೌರವ ತಂದು ಕೊಟ್ಟಿದ್ದೀರಿ. ಅದಕ್ಕಾಗಿ ಅಭಿನಂದನೆಗಳು ಎಂದರು.
Advertisement
ಸಾಧಕ ಮೋಹನ್‌ದಾಸ್ ಪೈಗೌರವ ಅತಿಥಿಯಾಗಿದ್ದ ಟಾಟಾ ಕೆಪಿಟಲ್ ಸಂಸ್ಥೆಯ ಸಿಇಒ ಪ್ರವೀಣ್ ಪಿ. ಕಡ್ಲೆ ಮಾತ ನಾಡಿ, ಟಿ.ವಿ. ಮೋಹನ್‌ದಾಸ್ ಪೈ ಅವರು ಇನ್‌ಫೋಸಿಸ್‌ನಲ್ಲಿ ಇದ್ದಾಗ ಇನ್‌ಫೋಸಿಸ್ ಸಂಸ್ಥೆಯನ್ನು ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಲಿಸ್ಟಿಂಗ್ ಮಾಡಲು ನಡೆಸಿದ ಪ್ರಯತ್ನವೇ ತನಗೆ ಟಾಟಾ ಸಂಸ್ಥೆಯನ್ನು ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟಿಂಗ್ ಮಾಡಲು ಪ್ರೇರಣೆ ನೀಡಿತು ಎಂದು ಸ್ಮರಿಸಿದರು. ಭಾಷೆಗಳ ಕಲಿಕೆಗೆ ಸಂಬಂಧಿಸಿ ಉಲ್ಲೇಖೀಸಿದ ಅವರು ಕೊಂಕಣಿ ಜನರು ಮಾತೃ ಭಾಷೆ ಕೊಂಕಣಿಯನ್ನು ಎಂದಿಗೂ ಮರೆಯಬಾರದು. ರಾಷ್ಟ್ರ ಭಾಷೆಯಾಗಿ ಹಿಂದಿ, ವಾಸ್ತವ್ಯ/ ಕೆಲಸ ಮಾಡುವಲ್ಲಿನ ಸ್ಥಳೀಯ ಭಾಷೆ ಹಾಗೂ ಜಾಗತಿಕ ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ ಕಲಿಯ ಬೇಕು. ಇವುಗಳ ಜತೆಗೆ ದೇವ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತವನ್ನೂ ಕಲಿತರೆ ಹೆಚ್ಚು ಜ್ಞಾನವನ್ನು ಪಡೆಯಲು ಸಹಾಯಕ ವಾಗುವುದು ಎಂದವರು ಹೇಳಿದರು. ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಜ್ಯೋತಿ ಲೆಬೊರೆಟರೀಸ್ ಜಂಟಿ ಆಡಳಿತ ನಿರ್ದೇಶಕ ಉಲ್ಲಾಸ್ ಕಾಮತ್, ಮೈಸೂರು ಗಣೇಶ ಬೀಡಿ ವರ್ಕ್ಸ್ ಆಡಳಿತ ನಿರ್ದೇಶಕ ಎಂ. ಜಗನ್ನಾಥ ಶೆಣೈ, ಭಾರತೀಯ ರಿಸರ್ವ್ ಬ್ಯಾಂಕಿನ ನಿವೃತ್ತ ಡೆಪ್ಯುಟಿ ಗವರ್ನರ್ ವಿ. ಲೀಲಾಧರ್, ಮುಂಬಯಿಯ ಇಂಡ್‌ಕೊ ರೆಮೆಡೀಸ್‌ನ ಜಂಟಿ ಆಡಳಿತ ನಿರ್ದೇಶಕ ಸಂದೀಪ್ ಬಾಂಬೋಲ್ಕರ್, ದೇವಗಿರಿ ಚಹಾ ಸಂಸ್ಥೆಯ ಆಡಳಿತ ನಿರ್ದೇಶಕ ನಂದಗೋಪಾಲ ಶೆಣೈ, ನಿವೃತ್ತ ಐಎಎಸ್ ಅಧಿಕಾರಿ ಡಾ| ಪಿ.ಡಿ. ಶೆಣೈ ಅತಿಥಿಗಳಾಗಿ ಭಾವಹಿಸಿದ್ದರು. ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯ ಅಧ್ಯಕ್ಷ ರಾಮದಾಸ ಕಾಮತ್ ಯು., ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯ ಕಾರ್ಯದರ್ಶಿ ಪ್ರದೀಪ್ ಜಿ. ಪೈ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ವೆಂಕಟೇಶ್ ಬಾಳಿಗಾ, ಅಲೆನ್ ಸಿ.ಎ. ಪಿರೇರ, ಕೆ. ಜಗದೀಶ್ ಶೆಣೈ, ಖಜಾಂಚಿ ಬಿ.ಆರ್. ಭಟ್, ಕಾರ್ಯದರ್ಶಿ ಬಿ. ಪ್ರಭಾಕರ ಪ್ರಭು, ಅಧ್ಯಕ್ಷ ದಿನೇಶ್ ಪೈ ಕೆ., ನಾರಾಯಣ ನಾಯ್ಕ, ಕೆ.ಬಿ. ಖಾರ್ವಿ, ವೀಣಾ ಹರೀಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿವೇತನ ಸ್ವೀಕರಿಸಿದ ಮೇಘನಾ, ತಾರಾ ಕಿಣಿ, ವಾಸು ಕೆ. ಶೆಣೈ, ರಾಹುಲ್ ಪೈ, ಕುಡಿ³ ಆಶಾ ಶೆಣೈ, ಕುಡುಬಿ ನಾಯಕ ನರಸಿಂಹ ನಾಯ್ಕ, ಬಿಸವ ಖಾರ್ವಿ ಅನಿಸಿಕೆ ಹೇಳಿದರು. ಪ್ರದೀಪ್ ಜಿ. ಪೈ ಸ್ವಾಗತಿಸಿ ರಾಮದಾಸ್ ಕಾಮತ್ ಯು. ವಂದಿಸಿದರು. ವೆಂಕಟೇಶ ಬಾಳಿಗಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ಬಸ್ತಿ ವಾಮನ ಶೆಣೈ ಅವರು ಕೊಂಕಣಿ ಮಾನ್ಯತಾ ದಿನಾಚರಣೆಯ ಸಂದೇಶ ನೀಡಿದರು. 3,800 ವಿದ್ಯಾರ್ಥಿಗಳಿಗೆ 3.50 ಕೋ.ರೂ. ವಿತರಣೆ
ಪ್ರಸ್ತುತ ವರ್ಷ ಸುಮಾರು 3,800 ವಿದ್ಯಾರ್ಥಿಗಳಿಗೆ 3.50 ಕೋಟಿ ರೂ. ವಿದ್ಯಾರ್ಥಿವೇತನ ವಿತರಿಸಲಾಗಿದೆ. ವಿದೇಶದಲ್ಲಿ ಶಿಕ್ಷಣ ಪಡೆಯುವ 31 ವಿದ್ಯಾರ್ಥಿಗಳಿಗೆ, 700 ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು. ಪದವಿ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಗಿದೆ ಎಂದು ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿ ಅಧ್ಯಕ್ಷ ರಾಮದಾಸ ಕಾಮತ್ ಯು. ಅವರು ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 2010ರಲ್ಲಿ ಆರಂಭವಾಗಿರುವ ಈ ನಿಧಿಯಡಿ 14,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 15 ಕೋಟಿ ರೂ. ವಿದ್ಯಾರ್ಥಿವೇತನ ವಿತರಿಸಲಾಗಿದೆ. ಹಲವಾರು ದಾನಿಗಳ ದೇಣಿಗೆಯಿಂದ ಈ ನಿಧಿಯನ್ನು ನಿರ್ವಹಿಸಲಾಗುತ್ತಿದೆ. ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿ ನಿಯಮಿತವಾಗಿ ನಡೆಸಲ್ಪಡುವ ಕ್ಷಮತಾ ಶಿಬಿರಗಳಲ್ಲಿ ಭಾಗವಹಿಸಿ ತರಬೇತಿ ಪಡೆಯುತ್ತಾರೆ. ಕಳೆದ ಐದು ವರ್ಷಗಳಲ್ಲಿ ಕ್ಷಮತಾ ಅಕಾಡೆಮಿಯ ಸುಮಾರು 20,000 ಮಾನವ ದಿನಗಳಷ್ಟು ತರಬೇತಿ ನೀಡಲಾಗಿದೆ ಎಂದವರು ಹೇಳಿದರು. ಕರಾವಳಿ ಜಿಲ್ಲೆಯಿಂದ ನಾಗರಿಕ ಸೇವೆಗೆ ಆಯ್ಕೆಯಾಗುವವರ ಸಂಖ್ಯೆ ಕಡಿಮೆ ಇದೆ. ಇದಕ್ಕಾಗಿ ಅಕ್ಟೋಬರ್ ತಿಂಗಳಿನಿಂದ ಮಂಗಳೂರಿನಲ್ಲಿ ಐಎಎಸ್ ಪರೀಕ್ಷೆ ತರಬೇತಿ ಕೇಂದ್ರ ಆರಂಭಿಸಲಾಗುವುದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಅಸಾಧ್ಯ ಯಾವುದೂ ಇಲ್ಲ
ಮುಖ್ಯ ಅತಿಥಿಯಾಗಿದ್ದ ಟಾಟಾ ಗ್ಲೋಬಲ್ ಬಿವರೇಜಸ್ ಮತ್ತು ಟಾಟಾ ಕಾಫಿ ಸಂಸ್ಥೆಗಳ ಅಧ್ಯಕ್ಷ ಹರೀಶ್ ಭಟ್ ಮಾತನಾಡಿ, ಮನುಷ್ಯ ಮನಸ್ಸು ಮಾಡಿದರೆ ಆತನಿಗೆ ಅಸಾಧ್ಯ ವಾದುದು ಯಾವುದೂ ಇಲ್ಲ. “ಅಸಾಧ್ಯ ಎಂಬ ಪದ ಮೂರ್ಖರ ಶಬ್ದಕೋಶದಲ್ಲಿ ಮಾತ್ರ ಇದೆ’ ಎಂದು ನೆಪೋಲಿಯನ್ ಹೇಳಿದ ಮಾತನ್ನು ಉಲ್ಲೇಖೀಸಿದರು. ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ 25 ಭಾಷೆಗಳನ್ನು ಬಲ್ಲವರಾಗಿದ್ದರು. ಐಸಿಐಸಿಐ ಬ್ಯಾಂಕಿನ ಅಧ್ಯಕ್ಷರು ಪ್ರತಿಯೊಂದು ಯೋಜನೆಯನ್ನು 90 ದಿನಗಳ ಗಡುವನ್ನು ಇರಿಸಿಕೊಂಡು ಕಾರ್ಯಗತಗೊಳಿಸಿದ್ದರು. ಟಿ.ವಿ. ಮೋಹನ್‌ದಾಸ್ ಪೈ ಅವರು ಇನ್‌ಫೋಸಿಸ್ ಉಪಾಧ್ಯಕ್ಷ ರಾಗಿದ್ದಾಗ ಸಂಸ್ಥೆಯನ್ನು ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಲಿಸ್ಟಿಂಗ್‌ನಲ್ಲಿ ಸೇರಿಸಿದ್ದರು. ಮುಂಬಯಿನ ಫೋರಂ ಆಫ್ ಫ್ರೀ ಎಂಟರ್‌ಪೈÅಸಸ್‌ನ ಎಂ.ಆರ್. ಪೈ 60ನೇ ವರ್ಷದಲ್ಲಿ ಸಂಸ್ಕೃತ ಕಲಿತಿದ್ದರು. ಟಾಟಾ ಕಂಪೆನಿಯ ಅಧ್ಯಕ್ಷ ಜಂಶದ್‌ಜಿ ಬ್ರಿಟಿಷರು ಅಸಾಧ್ಯ ಎಂದಿದ್ದ ಟಾಟಾ ಸ್ಟೀಲ್ ಸಂಸ್ಥೆಯನ್ನು 15 ವರ್ಷಗಳಲ್ಲಿ ಆರಂಭಿಸಿ ಲಂಡನ್‌ಗೆ ಸ್ಟೀಲ್ ಉತ್ಪನ್ನ ಗಳನ್ನು ರವಾನಿಸಿದ್ದರು. ಟೈಟಾನ್ ವಾಚ್ ಮತ್ತು ಜುವೆಲ್ಲರಿ ಜಾಗತಿಕವಾಗಿ ಪ್ರಸಿದ್ಧಿ ಪಡೆದಿದೆ ಎಂದವರು ವಿವರಿಸಿದರು. ಜೀವನದಲ್ಲಿ ಕನಸು ಕಂಡು, ದೂರದೃಷ್ಟಿಯನ್ನು ಹೊಂದಿ, ತನ್ನ ಶಕ್ತಿ ಸಾಮರ್ಥ್ಯವನ್ನು ಅರಿತು ಕಾರ್ಯೋನ್ಮುಖವಾದರೆ ಯಾವುದೂ ಅಸಾಧ್ಯವಲ್ಲ ಎಂದರು.