ಹುಬ್ಬಳ್ಳಿ: ನಮ್ಮ ಗ್ರಾಮೀಣ ಭಾಗದ ಕ್ರೀಡೆಗಳತ್ತ ಎಲ್ಲರೂ ಗಮನ ಹರಿಸಬೇಕು ಎಂದು ವಿಜಯ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕ ಬಂಡು ಕುಲಕರ್ಣಿ ಹೇಳಿದರು. ಶ್ರೀ ಜಗದ್ಗುರು ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ನಿಮಿತ್ತ ಫ್ರೌಢಶಾಲೆ, ಪಿಯು ಹಾಗೂ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಎಲ್ಲರೂ ಕ್ರಿಕೆಟ್-ಕಬಡ್ಡಿ ಬಿಟ್ಟರೆ ಇನ್ನುಳಿದ ಆಟಗಳತ್ತ ನೋಡುತ್ತಿಲ್ಲ. ಈ ಕ್ರೀಡೆಗಳೊಂದಿಗೆ ನಮ್ಮ ಗ್ರಾಮೀಣ ಕ್ರೀಡೆಗಳತ್ತ ಗಮನ ಹರಿಸಿ ಅವುಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಫುಟ್‌ಬಾಲ್ ತರಬೇತುದಾರ ಡಾ| ಐ.ಎಂ. ಮಕ್ಕುಬಾಯಿ ಮಾತನಾಡಿ, ವಿದ್ಯಾವರ್ಧಕ ಸಂಘದಿಂದ ಕ್ರೀಡಾ ವಸತಿ ಶಾಲೆ ಮಾಡಿದಲ್ಲಿ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಕ್ರೀಡಾ ಸಾಧಕರು ದೇಶ ಮಾತ್ರಲ್ಲದೇ ವಿದೇಶಗಳಲ್ಲೂ ತಮ್ಮ ಛಾಪು ಮೂಡಿಸುವಂತಾಗಲಿ ಎಂದು ಹೇಳಿದರು. ಸಂಘದ ಗೌರವ ಕಾರ್ಯಾಧ್ಯಕ್ಷ ಅರವಿಂದ ಕುಬಸದ ಅಧ್ಯಕ್ಷತೆ ವಹಿಸಿದ್ದರು.
ವಾಕರಸಾ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಹನುಮಂತ ಶಿಗ್ಗಾಂವ ಪ್ರಾಸ್ತಾವಿಕ ಮಾತನಾಡಿ, ಸಂಘದ 50 ವರ್ಷದ ಸಾಧನೆ ಮತ್ತು ಸುವರ್ಣ ಮಹೋತ್ಸವ ನಿಮಿತ್ತ ವರ್ಷದುದ್ದಕ್ಕೂ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಕ್ರೀಡಾಕೂಟದ ವಾಲಿಬಾಲ್ ಸ್ಪರ್ಧೆಯಲ್ಲಿ ಫ್ರೌಢಶಾಲೆಯ 14, ಪಿಯುಸಿಯ 12 ಹಾಗೂ ಪದವಿಯ 8 ತಂಡಗಳು, ದೇಹದಾಢ ಸ್ಪರ್ಧೆಯಲ್ಲಿ 25 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಇನ್ನು ಜೆ.ಸಿ.ನಗರದ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆಯಲಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ಫ್ರೌಢಶಾಲೆ 13, ಪಿಯುಸಿ 14 ಹಾಗೂ ಪದವಿಯ 8 ತಂಡಗಳು ಆಗಮಿಸಿವೆ.
ಆರ್.ಬಿ. ಕಾಗಿನೆಲಿ ಪ್ರಾರ್ಥಿಸಿದರು. ಪ್ರೊ| ಎ. ಎಲ್. ಪೊಲೀಸ್‌ಪಾಟೀಲ ಸ್ವಾಗತಿಸಿದರು. ಎಸ್.ಬಿ. ಹಿರೇಮಠ ನಿರೂಪಿಸಿದರು. ಎಂ.ಬಿ. ಸಾಲಿಮಠ ವಂದಿಸಿದರು.