Advertisement
ನಗರಗಳ ಅಂಗಡಿ, ಹೆದ್ದಾರಿಯಲ್ಲಿ ಕೆಲವು ವ್ಯಾಪಾರಿಗಳು ಗ್ರಾಹಕರಿಗೆ ಕಡಿಮೆ ಮಲ್ಲಿಗೆ ತೋರಿಸಿ, ದುಬಾರಿ ದರ ತೆತ್ತುಕೊಳ್ಳುವುದು ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ. ನಿಮ್ಮಲ್ಲಿ ಬುಧವಾರ ಪ್ರಕಟವಾದ (ಮಂಗಳವಾರದ ಮಾರುಕಟ್ಟೆ ವಿವರ) ಮಾರುಕಟ್ಟೆ ಮಾಹಿತಿಯಲ್ಲಿ ಅಟ್ಟೆಗೆ 820 ರೂ.ಗಳೆಂದಿತ್ತು. ಆದರೆ, ಹೆದ್ದಾರಿಯ ಪಾಂಗಾಳ ಬಳಿ 2 ಸಾವಿರ ರೂ.ವರೆಗೂ ದರ ವಿಧಿಸಲಾಯಿತು. ಮಾರುಕಟ್ಟೆಯ ಬೆಲೆಗೂ ಹೂವಿನ ಅಂಗಡಿಗಳ ದರಕ್ಕೂ 3 ಪಟ್ಟು ವ್ಯತ್ಯಾಸವೇಕೆ ಎಂದು ‘ಉದಯವಾಣಿ’ ಓದುಗರೊಬ್ಬರು ಪತ್ರಿಕೆಗೆ ದೂರು ನೀಡಿದ್ದರು. ವಾಸ್ತವ ಅರಿಯಲು ಶಂಕರಪುರ, ಕಾಪು, ಪಾಂಗಾಳ ಮತ್ತಿತರೆಡೆ ತೆರಳಿದಾಗ ನಿಜ ಎಂಬುದು ಅರಿವಿಗೆ ಬಂತು.
ಸೆಪ್ಟಂಬರ್ ಮೊದಲ ವಾರದಿಂದಲೇ ಅಟ್ಟೆಗೆ 820 ರೂ.ಗಳಿತ್ತು. ಹಬ್ಬ, ಮದುವೆ ಸೀಸನ್‌ನಲ್ಲಿ ಪ್ರತಿ ಬಾರಿಯೂ ಕೆಲ ವ್ಯಾಪಾರಿಗಳು 3 ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಗ್ರಾಹಕರೂ ಹೇಳುವಂತೆ, ಕಟ್ಟೆಗಿಂತ ತುಸು ಹೆಚ್ಚು ಪಡೆದರೆ ಸರಿ. ಆದರೆ 3 ಪಟ್ಟು ಹೆಚ್ಚಳ ಏಕೆ? ಇದು ಜನರನ್ನು ವಂಚಿಸಿದಂತಲ್ಲವೇ?’ ಎಂದು ಪ್ರಶ್ನಿಸುತ್ತಾರೆ ಗ್ರಾಹಕರು. ಕಾಪು : ಶಂಕರಪುರದ ದರ ನಿಗದಿ ಪಡಿಸುವ ಕಟ್ಟೆಯಲ್ಲಿ ಅಟ್ಟೆಯೊಂದಕ್ಕೆ ಗರಿಷ್ಠ ದರ 820 ರೂ. ನಿಗದಿಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ಜನಸಾಮಾನ್ಯರು ಕೊಳ್ಳುವ ಸ್ಥಿತಿಯಲ್ಲಿಲ್ಲ. ಕಾಪು ಪೇಟೆಯಲ್ಲಿ ಇರುವ ಹೂವಿನ ಅಂಗಡಿಗಳಲ್ಲಿ ಪ್ರತೀ ಅಟ್ಟೆ ಮಲ್ಲಿಗೆಗೆ 1,200 ರೂ. ನಿಂದ ಹಿಡಿದು 1,400 ರೂ. ವರೆಗೆ ಮಾರಾಟವಾಗುತ್ತಿದ್ದರೆ, ಪಾಂಗಾಳದ ಬಳಿಯ ವ್ಯಾಪಾರಿಗಳಲ್ಲಿ ಚೆಂಡಿಗೆ 500 ರೂ. ಆಗಿದ್ದು, ಅಟ್ಟೆಗೆ 2,000 ರೂ. ಆಗಿದೆ. ಕಾಪುವಿನಿಂದ ಕಟಪಾಡಿ – ಉಡುಪಿಗೆ ಹೋದರೆ ಕೆಲವೆಡೆ 2, 500 ರೂ.ವರೆಗೂ ಬುಧವಾರ ದರ ಚಾಲ್ತಿಯಲ್ಲಿತ್ತು.
Related Articles
Advertisement
ಸಿಕ್ಕಾಪಟ್ಟೆ ದರ ಏರಿಕೆಯನ್ನು ಖಂಡಿಸುವ ಗೃಹಿಣಿ ಶಾರದೇಶ್ವರಿ, ‘ಹೆದ್ದಾರಿ ಬದಿಯ ಹೂವಿನ ಅಂಗಡಿಗೆ ತೆರಳಿದರೆ ಅಲ್ಲಿ ಮಲ್ಲಿಗೆ ಹೂವೇ ಇಲ್ಲ ಎನ್ನುತ್ತಾರೆ. ಮತ್ತೆ ಕೇಳಿದರೆ ದರ ಹೆಚ್ಚಿದೆ, ಹಾಗಾಗಿ ಇಲ್ಲ ಎನ್ನುತ್ತಾರೆ. ಮತ್ತೂ ವಿನಂತಿಸಿದರೆ, ಸ್ವಲ್ಪ ಇದೆ. ಆದರೆ ಚೆಂಡಿಗೆ 500 ರೂ. ಎನ್ನುತ್ತಾರೆ. ಕಟ್ಟೆಯಲ್ಲಿ 820 ರೂ. ನಿಗದಿಯಾದ ದರ ಮೂರು ಪಟ್ಟು ಏರಿಸುವುದು ಎಷ್ಟು ಸರಿ? ಇದನ್ನು ಗ್ರಾಹಕರೂ ಪ್ರೋತ್ಸಾಹಿಸಬಾರದು’ ಎನ್ನುತ್ತಾರೆ ಅವರು.
ಜಾಜಿಗೆ ಬಂಪರ್ ಬೆಲೆ ಮಳೆಗಾಲ ಪ್ರಾರಂಭವಾದಂದಿನಿಂದಲೂ ನಿರಂತರ ಸುರಿವ ಮಳೆಯಿಂದಾಗಿ ಹೂವಿನ ಮೊಗ್ಗು ಹಾಳಾಗಿದ್ದು ಮಲ್ಲಿಗೆ ಇಳುವರಿ ಕಡಿಮೆಯಾಗಿದೆ. ಬೆಳೆ ಕಡಿಮೆಯಾಗಿ ಕಟ್ಟೆಗೆ ಬರುವ ಮಲ್ಲಿಗೆ ಹೂವಿನ ಪ್ರಮಾಣವೂ ಕಡಿಮೆಯಾಗಿದೆ. ಮಲ್ಲಿಗೆ ಹೂ ಇಲ್ಲದಿರುವುದರಿಂದ ಬೆಳೆಗಾರರಿಗೆ ಯಾವುದೇ ಖರ್ಚಿಲ್ಲದೆ ಬೆಳೆಯುವ ಜಾಜಿಗೆ ಬಂಪರ್ ಬೆಲೆ ಬಂದಿದೆ. ಕಳೆದ ವಾರದಿಂದ 300-400 ಆಸುಪಾಸಿನಲ್ಲಿದ್ದ ಜಾಜಿಗೆ ಕಳೆದೆರಡು ದಿನಗಳಿಂದ ಅಟ್ಟೆಗೆ 720 ರೂ.ತಲುಪಿದೆ. ಹೂ ಹೇರಳವಾಗಿದ್ದಾಗ ಬೇಡಿಕೆ ಕಡಿಮೆ ಇದ್ದು ನಷ್ಟ ಸಂಭವಿಸುತ್ತದೆ. ಹಬ್ಬಗಳ ಅವಧಿಯಲ್ಲಿ ಒಂದಿಬ್ಬರು ಅಗತ್ಯವಿರುವ ಗ್ರಾಹಕರು ಹೆಚ್ಚು ಹಣ ಕೊಟ್ಟು ಹೂ ಖರೀದಿಸಿದರೂ ನಾವು ಕಟ್ಟೆಯಿಂದ ಪ್ರತಿದಿನ ಕೊಂಡೊಯ್ಯುವ ಮಾರಾಟಗಾರರಿಗೆ ಕೊಡಬೇಕು. ಅಗತ್ಯವಿರುವವರು ಮಾತ್ರ ಹೆಚ್ಚು ಹಣಕೊಟ್ಟು ಹೂ ಕೊಂಡೊಯ್ಯುತ್ತಾರೆ.
– ವಿನ್ಸೆಂಟ್ ರೊಡ್ರಿಗಸ್, ಶಂಕರಪುರದ ವ್ಯಾಪಾರಿ