ಮಲ್ಪೆ: ಮೀನುಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿದರೆ ಭಾಗದ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದರು.
ಅವರು ಮಂಗಳವಾರ ಮಲ್ಪೆಯ ಸೀ ವಾಕ್-ಕಡಲ ಕಿನಾರೆಯ ಬಳಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕರಾವಳಿ ಕಾಂಗ್ರೆಸ್-ಮಲ್ಪೆ ಸಹಯೋಗದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಜೆ.ಪಿ. ಹೆಗ್ಡೆ ಮೀನುಗಾರಿಕಾ ಸಮುದಾಯಕ್ಕೆ ಹೊಸ ಚೇತನ ಕೊಟ್ಟಿದ್ದಾರೆ. ಅವರ ಆಯ್ಕೆಯ ಬಗ್ಗೆ ಯಾವ ಕಾರ್ಯಕರ್ತರಿಗೂ ಅಪಸ್ವರವಿಲ್ಲ ಎಂದರು.
ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ, ಕೆಪಿಸಿಸಿ ವಕ್ತಾರರಾದ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿದರು. ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ನಾಯಕರಾದ ಕಿಶನ್‌ಹೆಗ್ಡೆ ಕೊಳ್ಕೆಬೈಲ್, ದಿವಾಕರ ಕುಂದರ್, ಕೃಷ್ಣಮೂರ್ತಿ ಆಚಾರ್ಯ, ಪ್ರಖ್ಯಾತ್ ಶೆಟ್ಟಿ ಹರೀಶ್ ಕಿಣಿ, ಗಣೇಶ್ ನೆರ್ಗಿ, ರಮೇಶ್ ತಿಂಗಳಾಯ, ಮಹಾಬಲ ಕುಂದರ್, ಸಂಧ್ಯಾ ತಿಲಕ್‌ರಾಜ್, ನವೀನ್‌ಚಂದ್ರ, ಕೇಶವ ಕೋಟ್ಯಾನ್, ಮನೋಜ್ ಕರ್ಕೇರ ಚಂದ್ರ ಕೊಡವೂರು ಉಪಸ್ಥಿತರದ್ದರು. ಎಂ. ಎ. ಗಫೂರ್ ಸ್ವಾಗತಿಸಿದರು. ಸತೀಶ್ ಕೊಡವೂರು ನಿರೂಪಿಸಿದರು.
ಸವಲತ್ತುಗಳು ಜನರ ಮನೆ ಬಾಗಿಲಿಗೆ- ಪ್ರಸಾದ್‌ರಾಜ್
ಕಾಂಗ್ರೆಸ್ ನಾಯಕ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಉಡುಪಿ ಜಿಲ್ಲೆಯ ಸೃಷ್ಟಿಕರ್ತನಿಗೆ ಈ ಬಾರಿ ಜನರು ಆಶೀರ್ವಾದ ಮಾಡಲಿದ್ದಾರೆ. ಅವಿಭಜಿತ ದ. ಕ. ಜಿಲ್ಲೆಯಲ್ಲಿ ಉಡುಪಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಿದ ಕೀರ್ತಿ ಜಯಪ್ರಕಾಶ್ ಹೆಗ್ಡೆಯವರಿಗೆ ಸಲ್ಲುತ್ತದೆ. ಉಡುಪಿ ಜಿಲ್ಲೆ ಆದಾಗಿನಿಂದ ಸರಕಾರದ ಸವಲತ್ತುಗಳು ಜನರ ಮನೆ ಬಾಗಿಲಿಗೆ ಸುಲಭದಲ್ಲಿ ಬರುವಂತೆ ಮುಖ್ಯ ಕಾರಣ ಕರ್ತರಾಗಿದ್ದಾರೆ. ಅವರ ಜನಪರ ಕೆಲಸಕ್ಕೆ ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದರು.