Advertisement

ಬಂದ್‌ ಕುರಿತ ನಿಲುವು ತಿಳಿಸಲು ಸರ್ಕಾರಕ್ಕೆ ಹೈ ಸೂಚನೆ

12:14 PM Apr 11, 2018 | Team Udayavani |

ಬೆಂಗಳೂರು: ಬಂದ್‌ ಆಚರಣೆ ಕಾನೂನುಬಾಹಿರ ಹಾಗೂ ಬಂದ್‌ನಿಂದ ಉಂಟಾಗುವ ನಷ್ಟ ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಹಿಂದೆ ನೀಡಿದ್ದ ತೀರ್ಪು ಜಾರಿ ಬಗ್ಗೆ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

Advertisement

ಬಂದ್‌ ಆಚರಣೆ ಪ್ರಶ್ನಿಸಿ ವೇಳೆ ಉಂಟಾಗುವ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವನ್ನು ಬಂದ್‌ ಆಚರಿಸುವರೇ ಭರಿಸಬೇಕು ಎಂದು ಘೋಷಿಸುವಂತೆ ಕೋರಿ ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘದ ಅಧ್ಯಕ್ಷ ಸಿ.ರಾಜಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಏ. 12ರಂದು ಪುನ: ಕನ್ನಡಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಈ ಹಿಂದಿನ  ಆದೇಶದ ಬಗ್ಗೆ ಸರ್ಕಾರ ಯಾವುದೇ ಗಂಭೀರ ಕ್ರಮಗಳಿಗೆ ಮುಂದಾಗಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ವಾದ ಆಲಿಸಿದ  ನ್ಯಾಯಪೀಠ, ಬಂದ್‌ ಆಚರಣೆ  ಕಾನೂನು ಬಾಹಿರ ಎಂದು ಈಗಾಗಲೇ ತೀರ್ಪು ನೀಡಲಾಗಿದೆ. ಹೀಗಾಗಿ  ತೀರ್ಪು ಜಾರಿ ಹಾಗೂ ಬಂದ್‌ ಆಚರಣೆ ವೇಳೆ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವಾಗುವುದನ್ನು ತಪ್ಪಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ರಾಜ್ಯಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಮಹದಾಯಿ ನದಿ ನೀರು ವಿವಾದ ಬಗೆಹರಿಸುವಂತೆ ಕನ್ನಡ ವಾಟಾಳ್‌ ಪಕ್ಷ ಫೆ.4ರಂದು ನೀಡಿದ್ದ ಬಂದ್‌ “ಅಸಂವಿಧಾನಿಕ’ ಎಂದು ಹೈಕೋರ್ಟ್‌ ಫೆ. 2ರಂದು ತೀರ್ಪು ನೀಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next