ಬೆಂಗಳೂರು: ಕೋರಮಂಗಲ-ಚಲ್ಲಘಟ್ಟ ಕಣಿವೆಯ (ಕೆ ಆ್ಯಂಡ್ ಸಿ ವ್ಯಾಲಿ) ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ತುಂಬುವ ಸರ್ಕಾರದ ಯೋಜನೆ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಸಣ್ಣ ನೀರಾವರಿ ಇಲಾಖೆ, ಕೇಂದ್ರ ಅಂತರ್ಜಲ ಮಂಡಳಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದ ಆರ್. ಆಂಜನೇಯ ರೆಡ್ಡಿ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸದ ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜು.4ಕ್ಕೆ ಮುಂದೂಡಿತು.
ಇದೇ ವೇಳೆ, ಕೆ.ಸಿ.ವ್ಯಾಲಿಯ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸದಂತೆ ಮಧ್ಯಂತರ ಆದೇಶ ನೀಡುವಂತೆ ಅರ್ಜಿದಾರರ ಪರ ವಕೀಲರು ಮಾಡಿದ ಮನವಿ ತಳ್ಳಿ ಹಾಕಿದ ಪೀಠ, ಮೊದಲು ಸರ್ಕಾರ ಅರ್ಜಿಯ ಕುರಿತು ಆಕ್ಷೇಪಣೆ ಸಲ್ಲಿಸಲಿ. ಆನಂತರ ಮಧ್ಯಂತರ ಆದೇಶದ ಕುರಿತು ಪರಿಶೀಲಿಸೋಣ ಎಂದಿತು.
ಹೈಕೋರ್ಟ್ ಎಚ್ಚರಿಕೆ: ಕೆರೆ ತುಂಬಿಸುವ ಹೆಸರಲ್ಲಿ ಮಾಲಿನ್ಯ ನೀರು ಹರಿಸಲಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಯೋಜನೆಗೆ ಮಾಲಿನ್ಯ ತಜ್ಞರಿಂದ ಸಲಹೆ ಪಡೆದುಕೊಳ್ಳಲಾಗಿದೆಯೇ, ಕೆರೆಗಳಿಗೆ ನೀರು ಹರಿಸಿದ ಬಳಿಕ ನೀರಿನ ಗುಣಮಟ್ಟದ ಬಗ್ಗೆ ಅಧ್ಯಯನ ನಡೆಸಲಾಗಿದೆಯೇ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ವಕೀಲರು, ಕೆರೆಗಳಿಗೆ ನೀರು ತುಂಬಿಸುವ ಹೆಸರಲ್ಲಿ ಅದನ್ನು ಕಲುಷಿತಗೊಳಿಸಬೇಡಿ. ಒಂದೊಮ್ಮೆ ಸಂಸ್ಕರಿಸಿದ ನೀರು ಮಾಲಿನ್ಯಕಾರಿ ಎಂದಾದರೆ, ಇಡೀ ಯೋಜನೆಯನ್ನು ಮರುಪರಿಶೀಲಿಸಬೇಕಾದೀತು ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿತು.
ಈ ವೇಳೆ ಯೋಜನೆಯನ್ನು ಸಮರ್ಥಿಸಿಕೊಂಡ ಸರ್ಕಾರಿ ವಕೀಲರು, 2014ರಲ್ಲೇ ಯೋಜನೆ ಆರಂಭಗೊಂಡಿದ್ದು, ಈಗ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿದೆ. ಯೋಜನೆ ಆರಂಭಿಸುವಾಗಲೇ ತಜ್ಞರ ಅಭಿಪ್ರಾಯವನ್ನು ಪಡೆಯಲಾಗಿದ್ದು, ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುವುದರಿಂದ ಅಂತರ್ಜಲ ವೃದ್ಧಿಯಾಗುತ್ತಿದೆ. ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅರ್ಜಿದಾರರ ದೂರೇನು?: ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗೆ 610 ಎಂಎಲ್‌ಡಿ ನೀರು ಪೂರೈಸುವ ಕೆ.ಸಿ. ವ್ಯಾಲಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಡಿ ಬೆಂಗಳೂರಿನ ಎರಡು ಕಣಿವೆಗಳಲ್ಲಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಮೂರೂ ಜಿಲ್ಲೆಗಳಲ್ಲಿರುವ 163 ಕೆರೆಗಳಿಗೆ ಹರಿಸಲಾಗುತ್ತಿದೆ.
ಆದರೆ ಸಂಸ್ಕರಿಸಿದ ನೀರಿನಲ್ಲಿ ಸೀಸ ಮತ್ತು ಇತರ ರಾಸಾಯನಿಕಗಳಿವೆ. ಈಗಾಗಲೇ ನೀರಿನಲ್ಲಿ ಫ್ಲೋರೈಡ್ ಮತ್ತು ನೈಟ್ರೇಟ್ ಅಂಶ ಹೆಚ್ಚಾಗಿದ್ದು, ಜೊತೆಗೆ ಸೀಸ ಮತ್ತಿತರ ರಾಸಾಯನಿಕಗಳು ಅಂತರ್ಜಲ ಸೇರುವುದರಿಂದ ಅದು ಮತ್ತಷ್ಟು ಕಲುಷಿತವಾಗುತ್ತದೆ. ಜತೆಗೆ ನೀರು ಸಂಸ್ಕರಣ ತಂತ್ರಜ್ಞಾನ ಅಷ್ಟೊಂದು ಉತ್ತಮವಾಗಿಲ್ಲ. ಇದರಿಂದ ಮೂರು ಜಿಲ್ಲೆಗಳ 50 ಲಕ್ಷಕ್ಕೂ ಅಧಿಕ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ದೂರಿದ್ದಾರೆ.