“ಮೊದಲ ಸಲ ಸಿಡಿಲು ಬಡಿದಾಗ ಕಣ್ಣೆದುರಿಗೆ ಅಣ್ಣನನ್ನು ಕಳೆದುಕೊಂಡೆ. ಎರಡನೇ ಸಲ ಸಿಡಿಲು ಬಡಿದಾಗ ಕೊಟ್ಟಿಗೆಯಲ್ಲಿದ್ದ ಪ್ರೀತಿ ಪಾತ್ರವಾದ ಮೂರು ಹಸುಗಳೆಲ್ಲ ಸತ್ತು ಬಿದ್ದವು. ಈಗ ನಾವು ಸಿಡಿಲಿಗೆ ಹಿಡಿ ಶಾಪ ಹಾಕಿಕೊಂಡೆ ಮನೆ ಬದಲಾಯಿಸಿದ್ದೇವೆ. ಮನೆ ಜವಾಬ್ದಾರಿ ಹೊರಬೇಕಿದ್ದ ಅಣ್ಣನ ಸಾವು ಇನ್ನೂ ಕಣ್ಣ ಮುಂದೆಯೇ ಇದೆ. ನಮ್ಮ ಮನೆಯ ಎಲ್ಲ ಹೊರೆಯನ್ನು ನನ್ನ ಅಪ್ಪ ಇಳಿವಯಸ್ಸಿನಲ್ಲಿ ಹೊತ್ತುಕೊಂಡಿದ್ದಾರೆ. ಕಷ್ಟಪಟ್ಟು ನನ್ನನ್ನು ಸಾಕಿ ಕ್ರೀಡಾಪಟುವಾಗಿಸಿದ್ದಾರೆ. ಇದೀಗ ನಾನು ಹೈಜಂಪ್‌ನಲ್ಲಿ 2 ಸಲ ಅಂತಾರಾಷ್ಟ್ರೀಯ ಮತ್ತು 6 ಬಾರಿ ರಾಷ್ಟ್ರೀಯ ಪದಕ ಗೆದ್ದಿದ್ದೇನೆ. ಪ್ರಸ್ತುತ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದುಕೊಳ್ಳುವ ಹಠಕ್ಕೆ ಬಿದ್ದಿದ್ದೇನೆ. ಗೆದ್ದೇ ಗೆಲ್ಲುತ್ತೇನೆ…’ ಎಂದು ಹೇಳುವಷ್ಟರಲ್ಲಿ ಆ ಹುಡುಗಿಯ ಕಣ್ಣಾಲಿಗಳು ತೇವಗೊಂಡಿದ್ದವು.
Advertisement
ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ದಕ್ಷಿಣ ಏಶ್ಯನ್ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮತ್ತು ಶ್ರೀಲಂಕಾದಲ್ಲಿ ನಡೆದ ದಕ್ಷಿಣ ಏಶ್ಯನ್ ಕೂಟದ ಹೈಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಜೆಯ ಅಭಿನಯ ಶೆಟ್ಟಿ (20 ವರ್ಷ) “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳು, ಸಾಧನೆಯ ಕ್ಷಣಗಳನ್ನು ನೆನಪಿಸಿಕೊಂಡರು.
“ಆಗ ನನಗಿನ್ನೂ 12 ವರ್ಷ. 6ನೇ ತರಗತಿಯಲ್ಲಿದ್ದೆ. ನನ್ನ ಅಣ್ಣ ಅಭಿಲಾಷ್ (14 ವರ್ಷ). ಅವನು 8ನೇ ತರಗತಿಯಲ್ಲಿ ಓದುತ್ತಿದ್ದ, ಒಂದು ದಿನ ಜೋರಾಗಿ ಮಳೆ ಸುರಿಯುತ್ತಿತ್ತು. ಅಣ್ಣ ನಮ್ಮ ಮನೆಯ ಅಡುಗೆ ಕೋಣೆಯ ಕಿಟಕಿ ಪಕ್ಕದಲ್ಲಿ ನಿಂತಿದ್ದ. ಎಲ್ಲಿಂದ ಸಿಡಿಲು ಬಂದು ಬಡಿಯಿತೋ ಗೊತ್ತಿಲ್ಲ. ಒಂದೇ ಸೆಕೆಂಡ್‌ನಲ್ಲಿ ನಮ್ಮ ಮನೆ ಛಿದ್ರವಾಗಿತ್ತು. ಅಣ್ಣನನ್ನು ಕಳೆದುಕೊಂಡು ನಾವು ಅನಾಥರಾದೆವು. ಈ ನೋವು ಕಾಡುತ್ತಿದ್ದಾಗಲೇ 2017ರಲ್ಲಿ ಮತ್ತೂಮ್ಮೆ ಸಿಡಿಲು ಬಡಿಯಿತು. ಈ ವೇಳೆ ಮನೆಯ ಪಕ್ಕದಲ್ಲಿದ್ದ ಹಸು ಕಟ್ಟುವ ಕೊಟ್ಟಿಗೆ ನುಚ್ಚು ನೂರಾಗಿತ್ತು. ಮೂರು ಹಸುಗಳು ನೋಡ ನೋಡುತ್ತಿದ್ದಂತೆ ಸತ್ತು ಬಿದ್ದಿದ್ದವು. ಆ ದಿನವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು ಅಭಿನಯ. ಬದುಕು ಬದಲಿಸಿದ ಹೈಜಂಪ್
“ನನ್ನನ್ನು ತಂದೆ ಸುಧಾಕರ ಶೆಟ್ಟಿ-ತಾಯಿ ಸಜೀವಿ ಮಗನಂತೆ ಬೆಳೆಸಿದರು. ಅಣ್ಣನಿಲ್ಲದ ಮನೆಯಲ್ಲಿ ಆತನ ಸ್ಥಾನ ತುಂಬುವ ಜವಾಬ್ದಾರಿ ಹೊತ್ತೆ. ಕ್ರೀಡಾಪಟುವಾಗುವ ಕನಸು ಕಂಡಿದ್ದಾಗ ಆಳ್ವಾಸ್ ಶಿಕ್ಷಣ ಸಂಸ್ಥೆ ನನಗೆ ಅವಕಾಶ ಕೊಟ್ಟಿತು. ಹೈಜಂಪ್‌ನಲ್ಲಿ ನನಗೆ ಬದುಕು ಕಟ್ಟಿ ಕೊಟ್ಟಿತು. ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಲು ಮನ ತುಡಿಯುತ್ತಿದೆ’ ಎಂದರು ಅಭಿನಯ ಶೆಟ್ಟಿ.
Related Articles
ಪ್ರಸ್ತುತ ಅಭಿನಯ ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ಹಿರಿಯರ ರಾಷ್ಟ್ರೀಯ ಕೂಟದಲ್ಲಿ ರಾಜ್ಯ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಇದೆ. ಇದೇ ಮೊದಲ ಸಲ ಅವರು ಹಿರಿಯರ ಆ್ಯತ್ಲೆಟಿಕ್ಸ್ ತಂಡದಲ್ಲಿ ಸ್ಥಾನ ಪಡೆದಿರುವುದು ವಿಶೇಷ.
Advertisement
– ಹೇಮಂತ್ ಸಂಪಾಜೆ