ಹುಬ್ಬಳ್ಳಿ: ರೈತ ಬೆಳೆ ಸಾಲ ಮನ್ನಾ ಎಂಬ ಗೊಂದಲ- ಗೋಜಲು ಸ್ಥಿತಿ ಅನ್ನದಾತರಿಗೆ ನೆಮ್ಮದಿ ತರುವ ಬದಲು ಅವರ ನೆಮ್ಮದಿಯನ್ನೇ ಕಿತ್ತುಕೊಳ್ಳತೊಡಗಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ರೈತರ ಬೆಳೆ ಸಾಲ ಮನ್ನಾ ಕುರಿತು ಮಾಡಿದ ಘೋಷಣೆ ಸತತ ಬರದಿಂದ ಕಂಗೆಟ್ಟಿದ್ದ ರೈತರಲ್ಲಿ ಆಶಾಕಿರಣ ಮೂಡಿಸಿದಂತಾಗಿತ್ತು. ಆದರೀಗ “ಬೆಳೆ ಸಾಲ ಮನ್ನಾ’ ಸರಕಾರದ ಮಾತು ನಂಬಿದ್ದ ರೈತರೀಗ ಎರಡ್ಮೂರು ಪಟ್ಟು ಬಡ್ಡಿ ಕಟ್ಟುವಂತಾಗಿದ್ದು, ಚಾಲ್ತಿ ಖಾತೆದಾರರಿಗೆ ನೀಡುತ್ತೇವೆಂದು ಹೇಳಿದ್ದ 25,000 ರೂ.ಸಹ ಕೈಗೆ ಸಿಗದೆ ಪರದಾಡುವಂತಾಗಿದೆ.
ಸಾಲ ಮನ್ನಾ ಪ್ರಹಸನ: ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಲ್ಲಾ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಬಹುಮತ ಸಿಗದೆ, ಕಾಂಗ್ರೆಸ್ ಜತೆ ಸೇರಿ ಸಮ್ಮಿಶ್ರ ಸರಕಾರ ಮಾಡಿದಾಗಲೂ ಬೆಳೆ ಸಾಲ ಮನ್ನಾ ಕ್ರಮಕ್ಕೆ ಮುಂದಾಗಿದ್ದರು. ರೈತರ ಒಟ್ಟು ಬೆಳೆ ಸಾಲ 48 ಸಾವಿರ ಕೋಟಿ ರೂ.ಎಂದು ಅಂದಾಜಿಸಲಾಗಿತ್ತಾದರೂ, ಅದರಲ್ಲಿ ಅನೇಕ ಏರಿಳಿತ ಕಂಡಿತ್ತು. ಒಟ್ಟು ಸಾಲ ಮನ್ನಾವೋ, 2 ಲಕ್ಷ ರೂ.ವರೆಗೋ ಎಂಬ ಗೊಂದಲದ ಜತೆಗೆ ವಾಣಿಜ್ಯ ಬ್ಯಾಂಕ್‌ಗಳು ಮಾಹಿತಿ ನೀಡುತ್ತಿಲ್ಲವೆಂಬ ಆರೋಪ ಕೇಳಿ ಬಂದಿತ್ತು.
ಹಲವು ಸರ್ಕಸ್‌ಗಳ ನಂತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲದ ಗೊಂದಲದ ನಡುವೆಯೂ ಸರಕಾರ ಸಾಲ ಮನ್ನಾ ಅನುಷ್ಠಾನ ಆದೇಶ ಹೊರಡಿಸಿತ್ತು. ಇದಾದ ಕೆಲವು ತಿಂಗಳಲ್ಲಿ ಸಮ್ಮಿಶ್ರ ಸರಕಾರವೇ ಪತನಗೊಂಡಿತ್ತು. ಯಾವ ಜಿಲ್ಲೆಯಲ್ಲಿ ಎಷ್ಟು ರೈತರಿಗೆ ಎಷ್ಟು ಸಾಲ ಮನ್ನಾ ಆಗಿದೆ ಎಂಬುದರ ಮಾಹಿತಿಯನ್ನು ಕುಮಾರಸ್ವಾಮಿಯವರು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಆದರೂ, ಹಲವು ರೈತರು ಮಾತ್ರ ಸರಕಾರದ ಮಾತು ನಂಬಿ ನಾವು ಕೆಟ್ಟೇವು ಎಂದು ಹಿಡಿಶಾಪ ಹಾಕುವಂತಾಗಿದೆ.
ಕೊಕ್ಕೆ ತಂತ್ರ: ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ರೈತರು, ಹಳೆ ಸಾಲದ ಬಡ್ಡಿ ಪಾವತಿಸಿ ಮತ್ತೆ ಸಾಲ ನವೀಕರಣ ಇಲ್ಲವೇ ಸಾಲ ಪಾವತಿಸಿ ಹೊಸ ಸಾಲ ಪಡೆಯುತ್ತಿದ್ದರು. ಯಾವಾಗ ಸರಕಾರ ಸಾಲ ಮನ್ನಾ ಘೋಷಣೆ ಮಾಡಿತೋ ಅಲ್ಲಿಂದಲೇ ಸಾಲ ಇಲ್ಲವೆ ಬಡ್ಡಿ ಮರುಪಾವತಿ ಸ್ಥಗಿತಗೊಳಿಸಿದ್ದರು. ಸಾಲ ಮನ್ನಾದ ಗೊಂದಲ ಮುಗಿಯುವುದರೊಳಗೆ ವರ್ಷ ಕಳೆದಿತ್ತು. ಸಾಲದ ಬಡ್ಡಿ ಹೇರಿಕೆಯಾಗಿತ್ತು. ಮೂರು ಲಕ್ಷ ರೂ.ಸಾಲ ಪಡೆದ ರೈತ, ವಾರ್ಷಿಕ 26 ಸಾವಿರ ರೂ.ಬಡ್ಡಿ ಕಟ್ಟುತ್ತಿದ್ದ. ಇದೀಗ 80 ಸಾವಿರ ರೂ.ಬಡ್ಡಿ ಪಾವತಿಸುವಂತಾಗಿದೆ.
ಇನ್ನೊಂದು ಕಡೆ, ಚಾಲ್ತಿ ಸಾಲಗಾರರಿಗೆ ಹಾಗೂ ಈಗಾಗಲೇ ಸಾಲ ಮರುಪಾವತಿಸಿದವರಿಗೆ ಪ್ರೋತ್ಸಾಹ ಧನವಾಗಿ 25,000 ರೂ.ಗಳನ್ನು ನೀಡುವುದಾಗಿಯೂ ಸರಕಾರ ಘೋಷಿಸಿತ್ತು. ಅದಾದರೂ ಬಂದೀತಲ್ಲ ಎಂದು ಅನೇಕ ರೈತರು ಕಾಯ್ದು ಕುಳಿತಿದ್ದು, ಹಲವರಿಗೆ ಇದುವರೆಗೂ ನಯಾ ಪೈಸೆ ಬಂದಿಲ್ಲ. 25 ಸಾವಿರ ರೂ.ಪ್ರೋತ್ಸಾಹ ಧನವಾದರೂ ನೀಡಿ ಎಂದು ರೈತರು ಕೇಳಿದರೆ, ಅಧಿಕಾರಿಗಳು ಕೊಕ್ಕೆ ಮೇಲೆ ಕೊಕ್ಕೆ ಹಾಕುತ್ತಿದ್ದಾರೆ. ನಿಮ್ಮ ಪಡಿತರ ಕಾರ್ಡ್ ಇಲ್ಲವೆಂದು, ಹೊಸ ಕಾರ್ಡ್ ತರಬೇಕೆಂದು, ಉತಾರದಲ್ಲಿನ ಹೆಸರು ಕೊಂಚ ಬದಲು ಇದೆ ಎಂದು, ಸರ್ವೇ ನಂಬರ್ ತಪ್ಪಿದೆ ಎಂದು, ಭೂಮಿ ಯೋಜನೆಯಡಿ ಲಿಂಕ್ ಆಗಿಲ್ಲವೆಂದು..ಹೀಗೆ ಒಂದಲ್ಲ ಒಂದು ತಕರಾರು ತೆಗೆಯುವ ಮೂಲಕ ರೈತರನ್ನು ಸಾಗ ಹಾಕತೊಡಗಿದ್ದಾರೆ ಎಂಬುದು ಅನೇಕ ರೈತರ ಆಕ್ರೋಶ.
ಸಾಲ ಮನ್ನಾ ಎಂಬ ಸರಕಾರದ ಮಾತು ನಂಬಿ ನಾವು ಕೆಟ್ಟಿàವ್ರಿ. ಮನ್ನಾ ಆಗುತ್ತಂತ ನಂಬಿ ಹೆಚ್ಚಿನ ಬಡ್ಡಿ ತುಂಬೀವಿ. 25 ಸಾವಿರ ಹಣವಾದರೂ ಬರುತ್ತೆ ಅಂದ್ರೆ, ಅದಕ್ಕಾ ಇಲ್ಲಸಲ್ಲದ ಕೊಕ್ಕೆ ಹಾಕಿ ವಾಪಸ್ ಕಳ್ಸಾಕತ್ಯಾರ. ಹಿಂಗಾದ್ರ ರೈತರು ಬದುಕೋದಾದ್ರು ಹ್ಯಾಂಗ್ರಿ.
-ಹನುಮಂತ ಬೂದಿಹಾಳ, ಕೋಳಿವಾಡ ರೈತ
ಬೆಳೆ ಸಾಲ ಮನ್ನಾ ಎಂಬ ಘೋಷಣೆ ಅಡಿ ರೈತರಿಗೆ ದೊಡ್ಡ ಅನ್ಯಾಯ ಮಾಡಲಾಗಿದೆ. ಎರಡು ಲಕ್ಷ ಸಾಲ ಪಡೆದಿರುವ ಅನೇಕ ರೈತರು ಮನ್ನಾಕ್ಕೆ ಎಲ್ಲ ಅರ್ಹತೆ ಇದ್ದರೂ, ಅಂತಹವರ ಖಾತೆಗೆ ಕೇವಲ 25 ಸಾವಿರ ರೂ.ಹಾಕಿ ಸರಕಾರ ಕೈತೊಳೆದು ಕೊಂಡಿದೆ. ಇನ್ನು ಕೆಲವರಿಗೆ 25 ಸಾವಿರ ರೂ. ಸಹ ಬಂದಿಲ್ಲ.
-ಚಾಮರಸ ಪಾಟೀಲ, ಗೌರವಾಧ್ಯಕ್ಷ, ರಾಜ್ಯ ರೈತಸಂಘ-ಹಸಿರುಸೇನೆ
* ಅಮರೇಗೌಡ ಗೋನವಾರ