ಬೆಂಗಳೂರು: ಭಾಷಾ ಅಲ್ಪಸಂಖ್ಯಾತ ಖಾಸಗಿ ಶಾಲೆಗಳು ಪ್ರಸಕ್ತ ಸಾಲಿನ ಶಿಕ್ಷಣ ಕಾಯಿದೆ ಹಕ್ಕಿನ (ಆರ್‌ಟಿಇ) ಅಡಿಯಲ್ಲಿ ಶೇ 25 ರಷ್ಟು ಸೀಟುಗಳನ್ನು ನೀಡಬೇಕು ಎಂಬ ಏಕಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ನ್ಯಾಶನಲ್ ಎಜುಕೇಶನಲ್ ಟ್ರಸ್ಟ್, ಸಿಂಧಿ ಸ್ಕೂಲ್ ಸೇರಿದಂತೆ ಮತ್ತಿತರ 18ಕ್ಕೂ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಿತು.
ಅರ್ಜಿದಾರ ಶಿಕ್ಷಣ ಸಂಸ್ಥೆಗಳು ಭಾಷಾ ಅಲ್ಪಸಂಖ್ಯಾತ ಶಾಲೆಗಳ ಮಾನ್ಯತೆ ನೀಡುವ ಸಂಬಂಧ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಮುಂದಿನ ಎರಡು ವಾರಗಳಲ್ಲಿ ಮನವಿ ಸಲ್ಲಿಸಬೇಕು. ಈ ಅರ್ಜಿಗಳನ್ನು ಪರಿಶೀಲಿಸುವ ಆಯೋಗ ಆರು ತಿಂಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.
ಈ ಪ್ರಕ್ರಿಯೆಗಳು ಮುಕ್ತಾಯವಾಗುವ ತನಕ ಆರ್‌ಟಿಇ ಅಡಿ ಶೇ 25 ರಷ್ಟು ಸೀಟುಗಳು ಹಾಗೂ ಬ್ಯಾಕ್‌ಲಾಗ್ ನ ಶೇ 10 ರಷ್ಟು ಸೀಟುಗಳಿಗೆ ಪ್ರವೇಶ ನೀಡಬಾರದು. ಅಲ್ಲದೆ ಆರ್‌ಟಿಇ ಸೀಟಿನ ಅಡಿಯಲ್ಲಿ ಪ್ರವೇಶಾತಿ ಕಲ್ಪಿಸುವ ಸಂಬಂಧ ಅರ್ಜಿದಾರ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಸೂಚನೆ ನೀಡಬಾರದು ಎಂದು ರಾಜ್ಯಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿ ಅರ್ಜಿಗಳನ್ನು ಇತ್ಯರ್ಥಪಡಿಸಿತು.
ಪ್ರಕರಣ ಏನು?: ಆರ್‌ಟಿಇ ಕಾಯಿದೆ ಅಡಿಯಲ್ಲಿ ಭಾಷಾ ಅಲ್ಪಸಂಖ್ಯಾತ ಖಾಸಗಿ ಶಾಲೆಗಳು ಆರ್‌ಟಿಇ ಅಡಿಯಲ್ಲಿ ಶೇ 25ರಷ್ಟು ಸೀಟುಗಳನ್ನು ನೀಡಬೇಕು ಎಂದು ರಾಜ್ಯಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಅರ್ಜಿದಾರ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.
ಈ ಅರ್ಜಿಗಳನ್ನು ಇತ್ಯರ್ಥಪಡಿಸಿದ್ದ ಏಕಸದಸ್ಯ ಪೀಠ, ಶೇ 25 ರಷ್ಟು ಸೀಟುಗಳನ್ನು ನೀಡಬೇಕು ಹಾಗೂ ರಾಜ್ಯ ಪಠ್ಯಕ್ರಮ ಹೊಂದಿರುವ ಶಾಲೆಗಳು ಭಾಷಾ ಅಲ್ಪಸಂಖ್ಯಾತ ಪ್ರಮಾಣ ಪತ್ರ ಪಡೆಯುವ ಬಗ್ಗೆ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಕೇಂದ್ರ ಪಠ್ಯಕ್ರಮ ಹೊಂದಿರುವ ಶಾಲೆಗಳು ಕೇಂದ್ರಕ್ಕೆ ಮನವಿ ಸಲ್ಲಿಸಬೇಕು ಎಂದು ಜ.16ರಂದು ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಕೆಯಾಗಿತ್ತು.