ಮುಂಬಯಿ: ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ಮತ್ತು ಆಜಾನ್ ವಿವಾದದ ನಡುವೆಯೇ ಸಂಸದೆ ನವ್ ನೀತ್ ರಾಣಾ ಮತ್ತು ಆಕೆಯ ಪತಿ, ಪಕ್ಷೇತರ ಶಾಸಕ ರವಿ ರಾಣಾ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿವಾಸ ಮಾತೋಶ್ರೀ ಹೊರಭಾಗದಲ್ಲಿ ಹನುಮಾನ್ ಚಾಲೀಸ ಪಠಿಸುವುದಾಗಿ ಘೋಷಿಸುವ ಮೂಲಕ ಹೈಡ್ರಾಮಾಕ್ಕೆ ಸಾಕ್ಷಿಯಾದ ಘಟನೆ ನಡೆದಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಉತ್ತರಪ್ರದೇಶ; ಪ್ರಯಾಗ್ ರಾಜ್ ನಲ್ಲಿ ಒಂದೇ ಕುಟುಂಬದ ಐವರ ಬರ್ಬರ ಹತ್ಯೆ, ಮನೆಗೆ ಬೆಂಕಿ!
ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಶಿವಸೇನಾ ಕಾರ್ಯಕರ್ತರು ಕೂಡಾ ಸಂಸದೆ ನವ್ ನೀತ್ ರಾಣಾ ನಿವಾಸದ ಹೊರಭಾಗದಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಮಾತೋಶ್ರೀ ನಿವಾಸಕ್ಕೆ ಮತ್ತು ರಾಣಾ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ವರದಿ ವಿವರಿಸಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶದ ಮೇರೆಗೆ ನನ್ನ ಹಾಗೂ ಕುಟುಂಬ ಸದಸ್ಯರಿಗೆ ಮನೆಯಿಂದ ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ಸಂಸದೆ ರಾಣಾ ಆರೋಪಿಸಿದ್ದಾರೆ. ಮನೆಯಿಂದ ಹೊರಹೋಗದಂತೆ ಪೊಲೀಸರು ತಡೆಯುತ್ತಿದ್ದಾರೆ. ಶಿವಸೇನಾ ಕಾರ್ಯಕರ್ತರು ಕೂಡಾ ಮನೆಯ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದ್ದಾರೆ. ನಾವು ಮಾತೋಶ್ರೀ ನಿವಾಸವನ್ನು ಯಾವಾಗಲೂ ದೇವಾಲಯ ಎಂದು ಪರಿಗಣಿಸುತ್ತೇವೆ. ಆದರೆ ಉದ್ಧವ್ ಮಾತ್ರ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ರವಿ ರಾಣಾ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ.
ನಮ್ಮನ್ನು ಕೆಣಕುವಂತೆ ಮಹಾರಾಷ್ಟ್ರ ಸಿಎಂ ಶಿವಸೇನಾ ಕಾರ್ಯಕರ್ತರಿಗೆ ಹುಕುಂ ನೀಡಿದ್ದಾರೆ. ಅವರು ಬ್ಯಾರಿಕೇಡ್ ಗಳನ್ನು ಮುರಿದು ಹಾಕಿದ್ದಾರೆ. ನನ್ನನ್ನು ತಡೆದರೂ ನಾನು ಹೊರಗೆ ಹೋಗಿ ಮಾತೋಶ್ರೀ ಹೊರಭಾಗದಲ್ಲಿ ಹನುಮಾನ್ ಚಾಲೀಸ ಪಠಿಸುವುದಾಗಿ ನವ್ ನೀತ್ ರಾಣಾ ಪುನರುಚ್ಚರಿಸಿದ್ದಾರೆ.