Advertisement

ಪಿಐಎಲ್‌ ದುರ್ಬಳಕೆಗೆ ಹೈ ಅಸಮಾಧಾನ

11:55 AM Jun 01, 2018 | |

ಬೆಂಗಳೂರು: ನ್ಯಾಯ ವಂಚಿತ ಶೋಷಿತ ಹಾಗೂ ದುರ್ಬಲ ವರ್ಗದವರ ರಕ್ಷಣೆಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಇದ್ದು, ಇತ್ತೀಚಿಗೆ ವೈಯಕ್ತಿಕ ಹಿತಾಸಕ್ತಿ ಹಾಗೂ ಸಣ್ಣಪುಟ್ಟ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪಿಐಎಲ್‌ ಸಲ್ಲಿಸುತ್ತಾ, ಅದರ ವ್ಯಾಪ್ತಿ ಮೀರಲಾಗುತ್ತಿದೆ ಎಂದು ಹೈಕೋರ್ಟ್‌ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಮಾಜಿ ಶಾಸಕ ಮೊಯಿದ್ದೀನ್‌ ಬಾವಾ ಅವರ ಪತ್ನಿಯು ಮಂಗಳೂರು ನಗರದ ಇದಿಯಾ ಗ್ರಾಮದ ಸರ್ವೇ ನಂಬರ್‌ 48/8ಪಿ ನಿವೇಶನದಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆ. ನಂತರ ತಮ್ಮ ಪ್ರಭಾವ ಬಳಸಿ ಮಂಗಳೂರು ಮಹಾನಗರ ಪಾಲಿಕೆಯಿಂದ ಕಟ್ಟಡಕ್ಕೆ ಅನುಮತಿ ಪಡೆದಿದ್ದಾರೆ. ಈ ಬಗ್ಗೆ ಪಾಲಿಕೆಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರಾದ ಹನುಮಂತ ಕಾಮತ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯು ಗುರುವಾರ ನ್ಯಾಯಾಲಯದ ವಿಚಾರಣೆಗೆ ಬಂದಿತ್ತು. 

ಅರ್ಜಿಯ ವಿಚಾರಣೆ ನಡೆಸಿ, ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ್‌ ವಿಭಾಗೀಯ ಪೀಠ, ಮಾಜಿ ಶಾಸಕರ ಪತ್ನಿ ಪ್ರಭಾವ ಬಳಸಿ ಅಕ್ರಮ ಕಟ್ಟಡ ನಿರ್ಮಿಸಿದ್ದರೆ, ಆ ಕುರಿತು ಸ್ಥಳೀಯ ಪ್ರಾಧಿಕಾರಗಳ ಅಧಿಕಾರಿಗಳು ಕ್ರಮ ಜರುಗಿಸಬೇಕು. ಇನ್ನು ಅರ್ಜಿದಾರರು ಸ್ಥಳೀಯ ಆಡಳಿತಕ್ಕೆ ದೂರು ಸಲ್ಲಿಸಿ ಬಗೆಹರಿಸಿಕೊಳ್ಳಬೇಕು. ಪಿಐಎಲ್‌ ಇರುವುದು ವೈಯಕ್ತಿಕ ಉದ್ದೇಶ ಹಾಗೂ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಅಲ್ಲ.

ಬದಲಾಗಿ ನ್ಯಾಯವಂಚಿತರಾದ ಶೋಷಿತ, ಹಿಂದುಳಿದ ಹಾಗೂ ದುರ್ಬಲ ವರ್ಗದ ರಕ್ಷಣೆ ಮಾಡಲು. ಇತ್ತೀಚೆಗೆ ಅದರ ವ್ಯಾಪ್ತಿ ಮೀರಲಾಗುತ್ತಿದ್ದು, ಇಂತಹ ಪ್ರವೃತ್ತಿ ಸರಿಯಲ್ಲ. ಇದನ್ನು ಕೋರ್ಟ್‌ಗಳು ಉತ್ತೇಜಿಸುವುದಿಲ್ಲ. ಈ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಬೇಸರ ವ್ಯಕ್ತಪಡಿಸಿತು.  ಹನುಮಂತ ಕಾಮತ್‌ ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಯ ಅಂಶ ಇಲ್ಲ ಎಂದು ಅರ್ಜಿ ವಜಾಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next