ಬೆಂಗಳೂರು: ಸರಕು ಸಾಗಣೆ ವಾಹನಗಳಲ್ಲಿ ವಿದ್ಯಾರ್ಥಿಗಳು, ಮಕ್ಕಳು, ಕಾರ್ಮಿಕರು ಸೇರಿದಂತೆ ಪ್ರಯಾಣಿಕರನ್ನು ಕರೆದೊಯ್ಯಲು ತಡೆಗಟ್ಟುವ ಸಂಬಂಧ ಕ್ರಮವಹಿಸಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಬಿಬಿಎಂಪಿಯನ್ನು ಪ್ರತಿವಾದಿಯನ್ನಾಗಿ ಮಾಡಲು ಹೈಕೋರ್ಟ್ ನಿರ್ದೇಶಿಸಿದೆ.
ಈ ಅರ್ಜಿ ವಿಚಾರಣೆಯನ್ನು ಬುಧವಾರ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿದಾರರಿಗೆ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಸರಕು ಸಾಗಾಣಿಕೆ ವಾಹನಗಳಲ್ಲಿ ಮಕ್ಕಳು, ವಿದ್ಯಾರ್ಥಿಗಳು, ಕಾರ್ಮಿಕರು, ಪ್ರಯಾಣಿಕರನ್ನು ಕರೆದೊಯ್ಯುವುದನ್ನು ತಡೆಗಟ್ಟಲು ಕ್ರಮವಹಿಸಬೇಕು. ಮಕ್ಕಳು, ವಿದ್ಯಾರ್ಥಿಗಳು, ಕಾರ್ಮಿಕರು, ದುರ್ಬಲರು ಮತ್ತು ಅಸಹಾಯಕರಿಗಾಗಿ ಕೈಗೆಟಕುವ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಖಾತರಿಗೊಳಿಸಬೇಕು.
ಈ ಸಾಧ್ಯತೆಯ ಬಗ್ಗೆ ಪರಿಶೀಲಿಸಲು ರಾಜ್ಯ ಮಟ್ಟದ ನೀತಿ ರೂಪಿಸಲು ಅಧಿಕಾರಿಗಳು, ರಸ್ತೆ ಸುರಕ್ಷತೆ, ಸಾರ್ವಜನಿಕ ಸಾರಿಗೆ, ಮಕ್ಕಳ ಹಕ್ಕುಗಳ ತಜ್ಞರು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಅಂತರ್ ಇಲಾಖಾ ಸಮಿತಿ ರಚಿಸಬೇಕು.
ಸರಕು ಸಾಗಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದ ಉಂಟಾದ ಅವಗಢಗಳ ಬಗ್ಗೆ ತನಿಖೆ ಹಾಗೂ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನಷ್ಟ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.