Advertisement

ಅಂತಿಮ ವರದಿ ಸಲ್ಲಿಸದಂತೆ ಎಸಿಬಿಗೆ ಹೈ ನಿರ್ದೇಶನ

11:29 AM Aug 18, 2017 | |

ಬೆಂಗಳೂರು: ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು ಇತ್ಯರ್ಥವಾಗುವವರೆಗೆ ಭ್ರಷ್ಟಾಚಾರ ಆರೋಪದಡಿ ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಯ ಅಂತಿಮ ವರದಿ ಸಲ್ಲಿಸದಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ.

Advertisement

ಭ್ರಷ್ಟಾಚಾರ ನಿಗ್ರಹ ದಳ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಎಂ.ಪುಟ್ಟಸ್ವಾಮಿ ಸೇರಿದಂತೆ 18ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

ಎಸಿಬಿ ರಚನೆ ಮಾಡಿ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಇದೇ ಹೈಕೋರ್ಟ್‌ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿ ಇವೆ. ಈ ಅರ್ಜಿಗಳ ಸಂಬಂಧ ವಿಭಾಗೀಯ ಪೀಠ ತೀರ್ಮಾನ ಪ್ರಕಟಿಸುವವರೆಗೆ ಏಕಸದಸ್ಯ ಪೀಠ ಯಾವುದೇ ಆದೇಶ ಹೊರಡಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಟಪಟ್ಟ ಪೀಠ, ವಿಚಾರಣೆಯನ್ನು 4 ವಾರಗಳ ಕಾಲ ಮುಂದೂಡಿತು.

ಇದೇ ವೇಳೆ ತಮ್ಮ ಕಕ್ಷಿದಾರರ ವಿರುದ್ಧದ ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ನೀಡುವಂತೆ ಅರ್ಜಿದಾರರ ಪರ ವಕೀಲರು ಮಾಡಿದ ಮನವಿಯನ್ನು ತಳ್ಳಿಹಾಕಿದ ನ್ಯಾಯಪೀಠ, ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳು ಇತ್ಯರ್ಥವಾಗುವವರೆಗೆ ಪ್ರಕರಣದ ತನಿಖೆಯ ಸಂಬಂಧ ಅಂತಿಮ ವರದಿ ಸಲ್ಲಿಸದಂತೆ ಎಸಿಬಿಗೆ ನಿರ್ದೇಶಿಸಿತು.

ವಿಭಾಗೀಯ ಪೀಠದಲ್ಲಿ ಪಿಐಎಲ್‌ ಇತ್ಯರ್ಥವಾದ ಬಳಿಕ ಅರ್ಜಿದಾರರು ಮತ್ತೆ ತಮ್ಮ ಅರ್ಜಿಗಳನ್ನು ವಿಚಾರಣೆ ನಡೆಸುವಂತೆ ಏಕಸದಸ್ಯ ಪೀಠವನ್ನು ಕೋರಬಹುದು. ಇಲ್ಲವೇ ವಿಭಾಗೀಯ ಪೀಠದ ಮುಂದೆಯೇ ಅರ್ಜಿ ಸಲ್ಲಿಸಿ, ಸಾರ್ವಜನಿಕ ಹಿತಾಸಕ್ರಿ ಅರ್ಜಿಯೊಂದಿಗೆ ತಮ್ಮ ಅರ್ಜಿಗಳನ್ನೂ ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಬಹುದು ಎಂದು ಅರ್ಜಿದಾರರಿಗೆ ನ್ಯಾಯಪೀಠ ಸೂಚಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next