Advertisement

ಉಚಿತ ಬೂಸ್ಟರ್‌ ಡೋಸ್‌ಗೆ ಬಹುಬೇಡಿಕೆ

10:55 AM Jul 25, 2022 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್‌ ಏರಿಳಿತ ಕಾಣುತ್ತಿದ್ದು, ಈ ನಡುವೆ ಜಿಲ್ಲೆಯಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಡೋಸ್‌ ಪಡೆಯುವವರ ಸಂಖ್ಯೆಯೂ ಪ್ರಗತಿಯತ್ತ ಸಾಗುತ್ತಿದೆ.

Advertisement

18 ರಿಂದ 59 ವಯಸ್ಸಿನವರು ಕೋವಿಡ್‌ ಮುನ್ನೆಚ್ಚರಿಕೆ ಡೋಸ್‌ ಪಡೆದುಕೊಳ್ಳಲು ಈ ಹಿಂದೆ ನಿಗದಿತ ದರ ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಂದಿ ಅರ್ಹರು ಬೂಸ್ಟರ್‌ ಪಡೆದುಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಿಂದ ಜು.15ರಿಂದ 75 ದಿನಗಳ ಕಾಲ 18 ರಿಂದ 59 ವಯಸ್ಸಿನವರಿಗೆ ಉಚಿತ ಮುನ್ನೆಚ್ಚರಿಕೆ ಡೋಸ್‌ ನೀಡಲು ಕೇಂದ್ರ ಸರಕಾರ ಮುಂದಾಗಿದ್ದು, ಜಿಲ್ಲೆಯಲ್ಲಿ ಬೂಸ್ಟರ್‌ ಡೋಸ್‌ ಪಡೆದುಕೊಳ್ಳುವವರ ಸಂಖ್ಯೆಯೂ ಏರುತ್ತಿದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುವಂತೆ ಈ ಹಿಂದೆ ದಿನಕ್ಕೆ ಸುಮಾರು 250 ರಿಂದ 300 ಮಂದಿಯಷ್ಟೇ ಅರ್ಹರು ಬೂಸ್ಟರ್‌ ಡೋಸ್‌ ಪಡೆದುಕೊಳ್ಳುತ್ತಿದ್ದರು. ಆದರೆ, ಉಚಿತ ಲಸಿಕೆ ಘೋಷಣೆ ಬಳಿಕ ದಿನಕ್ಕೆ ಸುಮಾರು 2,000 ದಿಂದ 2,500 ಮಂದಿ ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ.

ಕೋವಿಡ್‌ ಬೂಸ್ಟರ್‌ ಡೋಸ್‌ ಪಡೆದುಕೊಳ್ಳುವ ಅಂತರವನ್ನು ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯ ಇಳಿಕೆ ಮಾಡಿದೆ. ಅದರಂತೆ ಕೋವಿಡ್‌ ಎರಡನೇ ಹಂತದ ಲಸಿಕೆ ಪಡೆದುಕೊಂಡ 9 ತಿಂಗಳ ಬದಲಾಗಿ ಆರು ತಿಂಗಳಿಗೆ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿ ಪ್ರಕಾರ 9 ತಿಂಗಳು ಅಥವಾ 39 ವಾರಗಳ ಬದಲಾಗಿ 6 ತಿಂಗಳು ಅಥವಾ 26 ವಾರಗಳಲ್ಲಿ ಇದೀಗ 18-59 ವಯಸ್ಸಿನ ಫಲಾನುಭವಿಗಳು ಕೋವಿಡ್‌ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಬಹುದಾಗಿದೆ.

ಮನೆಗೆ ತೆರಳಿ ಅರಿವು

Advertisement

ಮಂಗಳೂರು ಪಾಲಿಕೆ ಸೇರಿದಂತೆ ಜಿಲ್ಲೆಯಾದ್ಯಂತ ಡೆಂಗ್ಯೂ ನಿಯಂತ್ರಣದ ನಿಟ್ಟಿನಲ್ಲಿ ಮನೆ ಮನೆ ಸರ್ವೇ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಮಲೇರಿಯಾ ನಿಯಂತ್ರಣಾ ಕಾರ್ಯಕರ್ತರು, ಆರೋಗ್ಯ ಸುರಕ್ಷತಾ ಅಧಿಕಾರಿಗಳು ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಎಂಪಿಡಬ್ಲ್ಯೂ ಕಾರ್ಯಕರ್ತರು ಮನೆ ಮನೆ ಭೇಟಿ ನೀಡುತ್ತಿದ್ದಾರೆ. ಮನೆಯಲ್ಲಿ ಯಾರು ಅರ್ಹರು ಲಸಿಕೆ ಪಡೆದುಕೊಂಡಿಲ್ಲವೋ, ಎರಡನೇ ಡೋಸ್‌ ಪಡೆದು ಬೂಸ್ಟರ್‌ ಡೋಸ್‌ಗೆ ಬಾಕಿ ಇರುವರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಒಂದೆಡೆ ನಡೆಯುತ್ತಿದೆ.

ಲಸಿಕೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಳ: 18 ರಿಂದ 59 ವಯಸ್ಸಿನವರಿಗೆ ಉಚಿತ ಕೋವಿಡ್‌ ಬೂಸ್ಟರ್‌ ಡೋಸ್‌ ಲಸಿಕೆಯನ್ನು ಕೇಂದ್ರ ಸರಕಾರವು ಘೋಷಣೆ ಮಾಡಿದ ಬಳಿಕ ಲಸಿಕೆ ಪಡೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸದ್ಯ ದಿನಂಪ್ರತಿ ಸುಮಾರು ಎರಡರಿಂದ ಎರಡೂವರೆ ಸಾವಿರ ಮಂದಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದಲೂ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. – ಡಾ| ರಾಜೇಶ್‌, ಆರೋಗ್ಯ ಇಲಾಖೆ ಆರ್‌ಸಿಎಚ್‌ ಅಧಿಕಾರಿ

ಬೂಸ್ಟರ್‌ ಡೋಸ್‌ ಅಂಕಿ ಅಂಶ

ತಾಲೂಕು                ಅರ್ಹರು                   ಲಸಿಕೆ ಪಡೆದವರು

ಬಂಟ್ವಾಳ               21,8847                       11,961

ಬೆಳ್ತಂಗಡಿ                13,6190                       6,388

ಮಂಗಳೂರು             68,4076                      75,216

ಪುತ್ತೂರು                  17,0497                       22,505

ಸುಳ್ಯ                         84,067                        14,827

ಒಟ್ಟು                        12,93677                     130897

Advertisement

Udayavani is now on Telegram. Click here to join our channel and stay updated with the latest news.

Next