ಬೆಂಗಳೂರು: ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಅಡ್ಡಿಯುಂಟು ಪಡಿಸಿದ ಆರೋಪ ಸಂಬಂಧ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಎಸ್.ಎಂ ಶಿವಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಮ್ಮನ್ನು ವರ್ಗಾವಣೆ ಮಾಡಿದ್ದ ಆದೇಶ ಪ್ರಶ್ನಿಸಿ ತಹಶೀಲ್ದಾರ್ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ಕೆ.ಎಸ್ ಮುದ್ಗಲ್ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರರ ವರ್ಗಾವಣೆ ಆದೇಶಕ್ಕೆ ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ದೀಪಾಂಜಲಿ ನಗರದ ಇಂದಿರಾಕ್ಯಾಂಟೀನ್ ನಿರ್ಮಾಣಕ್ಕೆ ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಎಸ್.ಎಂ ಶಿವಕುಮಾರ್ ಅಡ್ಡಿಯುಂಟು ಪಡಿಸಿದ್ದಾರೆ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಜುಲೈ22ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಶಿವಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದರು. ಈ ಆದೇಶ ಪ್ರಶ್ನಿಸಿ ಮೊದಲು ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದ ಶಿವಕುಮಾರ್‌ಗೆ, ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದು ಕೆಎಟಿ ಸೂಚಿಸಿತ್ತು. ಹೀಗಾಗಿ ಅರ್ಜಿದಾರ ಶಿವಕುಮಾರ್, ರಾಜ್ಯಸರ್ಕಾರ ಕರ್ನಾಟಕ ನಾಗರಿಕ ಸೇವಾನಿಯಮ 10(1)(ಡಿ) ಉಲ್ಲಂಘಿಸಿ ತನ್ನನ್ನು ವರ್ಗಾವಣೆ ಮಾಡಿದೆ ಎಂದು ಆಕ್ಷೇಪಿಸಿ ಹೈಕೋರ್ಟ್ ಮೊರೆಹೋಗಿದ್ದರು.