Advertisement

ಕಾಂಗ್ರೆಸ್‌ ಮುಖಂಡರ ವಿರುದ್ಧದ ಎಫ್ಐಆರ್‌ಗೆ ಹೈಕೋರ್ಟ್‌ ತಡೆ

09:38 PM Sep 28, 2022 | Team Udayavani |

ಬೆಂಗಳೂರು: ಮಳೆಹಾನಿ ಪ್ರದೇಶಗಳಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿದ್ದಾಗ ಅವರು ಸಾಗುತ್ತಿದ್ದ ಮಾರ್ಗದಲ್ಲಿ ಸಾರ್ವಜನಿಕ ಶೌಚಾಲಯಗಳ ಪರಿಶೀಲನೆಗೆ ಮುಂದಾಗಿದ್ದ ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ಅವರನ್ನು ಅಕ್ರಮವಾಗಿ ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ 13 ಮಂದಿ ಕಾಂಗ್ರೆಸ್‌ ಮುಖಂಡರ ಮೇಲೆ ದಾಖಲಿಸಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಪ್ರಕರಣ ಸಂಬಂಧ ತಮ್ಮ ವಿರುದ್ಧ ಮಡಿಕೇರಿ ಟೌನ್‌ ಪೊಲೀಸರು ದಾಖಲಿಸಿರುವ ಎಫ್ಐಆರ್‌ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಚಂದ್ರಶೇಖರ್‌, ಎ.ಎಸ್‌. ಪೊನ್ನಣ್ಣ ಸಹಿತ ಕಾಂಗ್ರೆಸ್‌ನ 13 ನಾಯಕರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಎಫ್ಐಆರ್‌ ಮತ್ತು ಮಡಿಕೇರಿ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್ಸಿ ಕೋರ್ಟ್‌ ವಿಚಾರಣೆಗೆ ತಡೆಯಾಜ್ಞೆ ನೀಡಿ ಬುಧವಾರ ಆದೇಶಿಸಿತು.

ಅಲ್ಲದೆ, ಮಡಿಕೇರಿ ಟೌನ್‌ ಠಾಣೆ ಪೊಲೀಸರು ಮತ್ತು ದೂರುದಾರರಾದ ಅನಿತಾ ಪೂವಯ್ಯ ಅವರಿಗೆ ತುರ್ತು ನೋಟಿಸ್‌ ಜಾರಿ ಮಾಡಿದ ನ್ಯಾಯಪೀಠ, ನಗರಸಭೆಯ ಎಷ್ಟು ಶೌಚಾಲಯ ಪರಿಶೀಲನೆ ನಡೆಸಿದ್ದಾರೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಪ್ರಮಾಣ ಪತ್ರ ಸಲ್ಲಿಸುವಂತೆ ದೂರುದಾರರಿಗೆ ನಿರ್ದೇಶನ ನೀಡಿತು.

ದೂರುದಾರರನ್ನು ತಾವು ತಡೆದಿಲ್ಲ. ಅವರನ್ನು ಪೊಲೀಸರೇ ತಡೆದರು. ನಾವೆಲ್ಲ ಮಳೆ ಹಾನಿ ಪ್ರದೇಶದ ಪರಿಶೀಲಿಸುತ್ತಿದ್ದ ಸಿದ್ದರಾಮಯ್ಯ ಅವರ ಜತೆಗಿದ್ದೆವು. ಅವರ ಜತೆಗಿದ್ದರೆ ಅಕ್ರಮ ಕೂಟ ಸೇರಿದ ಅರ್ಥವಲ್ಲ. ಪ್ರವಾಸ ವೇಳೆ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದವರ ವಿರುದ್ಧ ದೂರು ದಾಖಲಿಸಿದ್ದಕ್ಕೆ ಪ್ರತಿಯಾಗಿ ತಮ್ಮನ್ನು ಗುರಿಯಾಗಿಸಿಕೊಂಡು ದೂರು ನೀಡಿ ಕಿರುಕುಳ ನೀಡಲು ಉದ್ದೇಶಿಸಿದ್ದಾರೆ. ರಾಜಕೀಯ ಪ್ರೇರಿತ ಮತ್ತು ದುರುದ್ದೇಶ ಪೂರ್ವಕವಾಗಿ ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್‌ ಅನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಕರಣವೇನು?
ನಗರಸಭೆ ಉಪಾಧ್ಯಕ್ಷರು, ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರು ಆ.18ರಂದು ಮಡಿಕೇರಿ ನಗರದ ಮೂರ್ನಾಡು ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಅಶುಚಿತ್ವದ ಬಗ್ಗೆ ವೀಕ್ಷಿಸಲು ತೆರಳುತ್ತಿದ್ದಾಗ ಜಿ.ಟಿ. ವೃತ್ತದ ಬಳಿ ಪೊಲೀಸರು ತಡೆದು ಮುಂದಕ್ಕೆ ತೆರಳದಂತೆ ಸೂಚಿಸಿದರು. ಕಾರಣ ಕೇಳಿದ್ದಕ್ಕೆ ಈ ರಸ್ತೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬರುತ್ತಿರುವ ಕಾರಣ ಸಂಚಾರ ತಡೆಹಿಡಿಯಲಾಗಿದೆ ಎಂದು ತಿಳಿಸಿದರು.

Advertisement

ಅದೇ ಸಂದರ್ಭದಲ್ಲಿ ಮಂಗಳೂರು ರಸ್ತೆಯಿಂದ ಜಿ.ಟಿ. ವೃತ್ತದ ಕಡೆಗೆ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್‌ ಮುಖಂಡರು ತಮ್ಮನ್ನು ಕಂಡು ಅಕ್ರಮ ಕೂಟ ಕಟ್ಟಿಕೊಂಡು ಬಂದು ಹಲ್ಲೆ ಯತ್ನ ನಡೆಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದರು ಎಂದು ಆರೋಪಿಸಿ ಆ.19ರಂದು ದೂರು ನೀಡಿದ್ದರು.
ಅದನ್ನು ಆಧರಿಸಿ ಅರ್ಜಿದಾರರ ವಿರುದ್ಧ ಮಡಿಕೇರಿ ಟೌನ್‌ ಪೊಲೀಸರು ಅಕ್ರಮ ಕೂಟ ಸೇರಿದ, ಅವಮಾನ ಉಂಟು ಮಾಡಿದ, ಗಲಭೆ ನಡೆಸಿದ ಆರೋಪದ ಸಂಬಂಧ ಎಫ್ಐಆರ್‌ ದಾಖಲಿಸಿದ್ದರು. ಪ್ರಕರಣವು ಮಡಿಕೇರಿಯ ಪ್ರಧಾನ ಸಿವಿಲ್‌ ಮತ್ತು ಜೆಎಂಫ್ಸಿ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next