ಬೆಂಗಳೂರು: ಲಾಕ್‌ಡೌನ್‌ನಿಂದ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಹೈಕೋರ್ಟ್ ಕಲಾಪಗಳು ಸೋಮವಾರದಿಂದ ಪುನಾರಂಭವಾಗಿದ್ದು, ವಕೀಲರು ಹಾಗೂ ಅವರ ಸಹಾಯಕ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಕೋರ್ಟ್‌ಗೆ ಆಗಮಿಸಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಬೆಳಗ್ಗೆ 10 ಗಂಟೆಯಿಂದಲೇ ವಕೀಲರು ಕೋಟ್ ìಗೆ ಬರಲಾರಂಭಿಸಿದರು.
ಈ ಮಧ್ಯೆ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾ. ಎ.ಎಸ್. ಓಕಾ ಸ್ವತಃ ಹೈಕೋರ್ಟ್ ಪ್ರವೇಶ ದ್ವಾರಕ್ಕೆ ಆಗಮಿಸಿ ಅಲ್ಲಿನ ಅವ್ಯವಸ್ಥೆ ಕಂಡು ಬೇಸರ ವ್ಯಕ್ತಪಡಿಸಿದರು. ಭಾನುವಾರ ಒಂದೇ ದಿನ ರಾಜ್ಯದಲ್ಲಿ 300 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯವಾಗಿದೆ.
ಛತ್ತೀಸಗಡ್ ಹಾಗೂ ದೆಹಲಿ ಹೈಕೋರ್ಟ್‌ಗಳು ಕಲಾಪ ಆರಂಭ ಮಾಡಿದರೂ ನಂತರ ಸ್ಥಗಿತಗೊಳಿಸಲಾಗಿದೆ. ಸದ್ಯ ದೇಶದಲ್ಲಿ ಎಲ್ಲಿಯೂ ಹೈಕೋರ್ಟ್ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಆದರೆ, ಕರ್ನಾಟಕ ಹೈಕೋರ್ಟ್ ಕಾರ್ಯಾರಂಭಿಸಿದ್ದು, ನ್ಯಾಯಮೂರ್ತಿಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಕಲಾಪ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಕೀಲರು ಬೆಂಬಲ ನೀಡದೆ ಹೋದರೆ ಕಲಾಪ ನಡೆಸಲು ಹೇಗೆ ಸಾಧ್ಯವಾಗುತ್ತದೆ ಎಂದು ಬೇಸರ ಹೊರ ಹಾಕಿದರು.
ಕಲಾಪ ಸ್ಥಗಿತದ ಎಚ್ಚರಿಕೆ: ವಕೀಲರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅನವಶ್ಯಕಾಗಿ ಗುಂಪು ಸೇರಬಾರದು. ಕೋರ್ಟ್ ಆವರಣ ಪ್ರವೇಶಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಿಯಮ ಪಾಲನೆ ಮಾಡಬೇಕು. ಯಾರಿಗೆ ಅನುಮತಿ ನೀಡಲಾಗಿದೆಯೇ ಅವರು ಮಾತ್ರ ಕೋರ್ಟ್ ಆವರಣ ಪ್ರವೇಶಿಸಬೇಕು. ಇಲ್ಲದೇ ಹೋದರೆ ಕೋರ್ಟ್ ಕಲಾಪವನ್ನೇ ಸ್ಥಗಿತಗೊಳಿಸುವುದಾಗಿ ಮುಖ್ಯ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು. ಹಾಗೆಯೇ, ಯಾರಿಗೆ ಅನುಮತಿ ನೀಡಲಾಗಿದೆಯೋ ಅವರನ್ನು ಮಾತ್ರ ಕೋರ್ಟ್ ಆವರಣ ಪ್ರವೇಶ ಮಾಡಲು ಅವಕಾಶ ನೀಡಬೇಕು.
ಇತರರಿಗೆ ಪ್ರವೇಶವಕಾಶ ನೀಡಬಾರದು ಎಂದು ಮುಖ್ಯ ನ್ಯಾಯಮೂರ್ತಿಗಳು ಇದೇ ವೇಳೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಮತ್ತೂಂದೆಡೆ ವೈದ್ಯಕೀಯ ಸಿಬ್ಬಂದಿಯು ಅನುಮತಿ ಪಡೆದಿದ್ದ ವಕೀಲರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದರು. ಉಷ್ಣಾಂಶ ಕಡಿಮೆಯಿದ್ದ ವಕೀಲರಿಗೆ ಕೋರ್ಟ್ ಪ್ರವೇಶಿಸಲು ಅವಕಾಶ ನೀಡಿದರು. ಕೋರ್ಟ್‌ಗೆ ಭೇಟಿ ಕೊಟ್ಟವರ ಹೆಸರು ಹಾಗೂ ಇತರೆ ವಿವರಗಳನ್ನು ನಮೂದು ಮಾಡಿಕೊಂಡರು. ಸಾರ್ವಜನಿಕರು, ವ್ಯಾಜ್ಯದಾರರಿಗೆ ಕೋರ್ಟ್ ಪ್ರವೇಶ ನಿರ್ಬಂಧ ವಿಧಿಸಲಾಗಿತ್ತು.
ಎಂಟು ಕೋರ್ಟ್‌ಗಳು ಕಾರ್ಯನಿರ್ವಹಣೆ: ಸೋಮವಾರ ಹೈಕೋರ್ಟ್‌ನ ಎರಡು ವಿಭಾಗೀಯ ಪೀಠ ಸೇರಿದಂತೆ ಒಟ್ಟು 8 ಪೀಠಗಳು ಮಾತ್ರ ಕಾರ್ಯ ನಿರ್ವಹಿಸಿದವು. ಬೆಳಗಿನ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ನಡೆಯಿತು. ಮಧ್ಯಾಹ್ನ ತೆರೆದ ನ್ಯಾಯಾಲಯದಲ್ಲಿ ಕಲಾಪ ನಡೆಯಿತು. ವಕೀಲರು ಖುದ್ದು ಹಾಜರಾಗಿ ವಾದ ಮಂಡಿಸಿದರು. ವಕೀಲರು 15ರಿಂದ 20 ನಿಮಿಷಗಳ ಒಳಗೆ ವಾದ ಮಂಡನೆ ಪೂರ್ಣಗೊಳಿಸಲು ಅವಕಾಶ ನೀಡಲಾಗಿತ್ತು.
ವಕೀಲರು ಹಾಗೂ ನ್ಯಾಯಮೂರ್ತಿ, ಕೋರ್ಟ್ ಸಿಬ್ಬಂದಿ ಮಾಸ್ಕ್ ಹಾಗೂ ಕೈಗವಸು ಧರಿಸಿದ್ದು ಸಾಮಾನ್ಯವಾಗಿತ್ತು. ಪ್ರತಿ ಕೋರ್ಟ್ ಹಾಲ್‌ನಲ್ಲಿಯೂ ಸ್ಯಾನಿಟೈಸರ್ ಸೇರಿದಂತೆ ಮುಂಜಾಗ್ರತಾ ಕ್ರಮಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗ ಸೂಚಿಗಳ ಫಲಕಗಳನ್ನು ಕೋರ್ಟ್ ಆವರಣದ ಪ್ರಮುಖ ಸ್ಥಳದಲ್ಲಿ ಪ್ರದರ್ಶನ ಮಾಡಲಾಗಿತ್ತು.