Advertisement

ಹೈಕೋರ್ಟ್‌ ಅನುಮತಿ ವದಂತಿ ಸೃಷ್ಟಿಸಿ ಗಣಿಗಾರಿಕೆ

12:00 PM Sep 11, 2019 | Team Udayavani |

ಮಂಡ್ಯ: ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಕಾವಲ್ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ನ್ಯಾಯಾಲಯದ ಅನುಮತಿ ಸಿಕ್ಕಿದೆ ಎಂದು ವದಂತಿ ಸೃಷ್ಟಿಸಿ ಕಲ್ಲು ಗಣಿ ಹಾಗೂ ಕ್ರಷರ್‌ ಮಾಲೀಕರು ನಿಷೇಧಾಜ್ಞೆ ನಡುವೆಯೂ ಕಲ್ಲು ಗಣಿಗಾರಿಕೆ ಆರಂಭಿಸಿದ್ದಕ್ಕೆ ಜಿಲ್ಲಾಡಳಿತ ಇದೀಗ ತಡೆಯೊಡ್ಡಿದೆ.

Advertisement

ಬೇಬಿ ಬೆಟ್ಟ ಕಾವಲ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಕುರಿತಂತೆ ಜಿಲ್ಲಾಧಿಕಾರಿಗಳು ಗಣಿ ಮಾಲೀಕರಿಗೆ ನೋಟಿಸ್‌ ಕೊಟ್ಟು, ವಿಚಾರಣೆ ನಡೆಸಲು ಈ ಹಿಂದೆ ಹೈಕೋರ್ಟ್‌ ಸೂಚಿಸಿತ್ತು. ಇದನ್ನು ಅನುಕೂಲ ಸಿಂಧುವಾಗಿ ಬಳಸಿಕೊಂಡ ಗಣಿ ಮಾಲೀಕರು, ನ್ಯಾಯಾಲಯದಿಂದ ಗಣಿಗಾರಿಕೆ ನಡೆಸಲು ಅನುಮತಿ ಸಿಕ್ಕಿದೆ ಎಂದು ಬಿಂಬಿಸಿ ಸೋಮವಾರವೇ ನಿಷೇಧಾಜ್ಞೆ ಉಲ್ಲಂಘಿಸಿ ಗಣಿಗಾರಿಕೆ ನಡೆಸಲಾರಂಭಿಸಿದ್ದರು. ಹಲವು ಕ್ರಷರ್‌ ಮಾಲೀಕರೂ ಕಾರ್ಯಾಚರಣೆ ಶುರು ಮಾಡಿದ್ದರು.

ಇದರಿಂದ ತಕ್ಷಣವೇ ಎಚ್ಚೆತ್ತ ಜಿಲ್ಲಾಡಳಿತ ಗಣಿ ಹಾಗೂ ಕ್ರಷರ್‌ ಮಾಲೀಕರಿಗೆ ನೋಟಿಸ್‌ ನೀಡಿ ಎಲ್ಲಾ ಗಣಿಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಮುಂದಿನ ಆದೇಶದವರೆಗೆ ಯಾವುದೇ ರೀತಿಯ ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದೆ.

ಏನಿದು ಪ್ರಕರಣ? ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯಲ್ಲಿ ನಿಗೂಢ ಶಬ್ಧಗಳು ಪದೇಪದೆ ಕೇಳಿ ಬರುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇದು ಗಣಿ ಪ್ರದೇಶದಲ್ಲಿ ಕಲ್ಲು ಸಿಡಿಸಲು ಬಳಸುತ್ತಿರುವ ಸ್ಫೋಟದ ಸದ್ದುಗಳೇ ಎಂಬ ಬಗ್ಗೆ ಅನುಮಾನಗಳು ದಟ್ಟವಾಗಿದ್ದವು. ರಾಜ್ಯ ನೈಸರ್ಗಿಕ ವಿಕೋಪ ಹಾಗೂ ಉಸ್ತುವಾರಿ ಕೇಂದ್ರ 25 ಆಗಸ್ಟ್‌ 2018ರಂದು ನೀಡಿದ್ದ ವರದಿ ಈ ಅಂಶವನ್ನು ಬಹಿರಂಗಪಡಿಸಿತ್ತು. ಆನಂತರದಲ್ಲಿ ನಾಲ್ಕು ತಿಂಗಳ ಕಾಲ ಸ್ಥಗಿತಗೊಂಡಿದ್ದ ಗಣಿಗಾರಿಕೆ ಗಣಿಧಣಿಗಳ ಲಾಭಿ ಹಾಗೂ ರಾಜಕಾರಣಿಗಳ ಪ್ರಭಾವದಿಂದ ಮತ್ತೆ ಪುನಾರಂಭಗೊಂಡಿತ್ತು. ಆನಂತರದಲ್ಲೂ ಸಾಕಷ್ಟು ಬಾರಿ ಕೆಆರ್‌ಎಸ್‌ ಸಮೀಪ ಭಾರೀ ನಿಗೂಢ ಶಬ್ಧಗಳು ಕೇಳಿಬರುತ್ತಲೇ ಇದ್ದವು.

2019ರ ಆಗಸ್ಟ್‌ 17ರಂದು ಮತ್ತೆ ಭಾರೀ ಶಬ್ಧ ಸರಣಿಯಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಕೆಆರ್‌ಎಸ್‌ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಹಾಗೂ ಕ್ರಷರ್‌ ಕಾರ್ಯಾಚರಣೆ ಸ್ಥಗಿತಗೊಳಿಸಿ ಬೀಗ ಹಾಕಲಾಗಿತ್ತು.

Advertisement

ಗಣಿ ಮಾಲೀಕರಿಂದ ಹೈಕೋರ್ಟ್‌ ಮೊರೆ: ಕೆಆರ್‌ಎಸ್‌ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ 20 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ 9 ಮಂದಿ ಗಣಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು.

ನಿಷೇಧಾಜ್ಞೆಯಿಂದ ಗಣಿ ಉದ್ಯಮಕ್ಕೆ ತೊಂದರೆಯಾಗುತ್ತಿದೆ. ಕೆಲಸವನ್ನೇ ನಂಬಿಕೊಂಡಿರುವ ಕೂಲಿಯಾಳುಗಳ ಬದುಕು ಬೀದಿ ಪಾಲಾಗುತ್ತಿದೆ. ಆದ ಕಾರಣ ಕೂಡಲೇ ನಿಷೇಧಾಜ್ಞೆ ತೆರವುಗೊಳಿಸಿ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ರಿಟ್ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ನಿಷೇಧಾಜ್ಞೆ ಜಾರಿ ಹಿಂದಿನ ಉದ್ದೇಶ ನ್ಯಾಯಾಲಯಕ್ಕೆ ತಿಳಿದಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ಕಲ್ಲು ಗಣಿ ಮಾಲೀಕರಿಗೆ ಷೋಕಾಸ್‌ ನೋಟಿಸ್‌ ಕೊಟ್ಟು ವಿಚಾರಣೆ ನಡೆಸಬೇಕು. ನಂತರ ಪರಿಶೀಲನೆ ನಡೆಸಿ ಗಣಿಗಾರಿಕೆ ನಡೆಸುವುದರಿಂದ ಆಗಬಹುದಾದ ಸಾಧಕ-ಬಾಧಕಗಳನ್ನು ಅರಿತು ಮುಂದಿನ ಕ್ರಮ ಕೈಗೊಳ್ಳುವಂತೆ ಸೆ.3ರಂದು ತಿಳಿಸಿತ್ತು.

ಸೆ.9ರಂದು ವಿಚಾರಣೆಗೆ ಹಾಜರು: ಅದರಂತೆ ಜಿಲ್ಲಾಧಿಕಾರಿ ಡಾ.ಎಂ.ಪಿ.ವೆಂಕಟೇಶ್‌ ಅವರು ಸೆ.6ರಂದು ವಿಚಾರಣೆಗೆ ಹಾಜರಾಗುವಂತೆ ಕಲ್ಲು ಗಣಿ ಹಾಗೂ ಕ್ರಷರ್‌ ನಡೆಸುವವರಿಗೆ ಸೂಚಿಸಿದ್ದರು. ಆದರೆ, ಅಂದು ಗೈರಾಗಿದ್ದ ಗಣಿ ಮಾಲೀಕರು ಸೆ.9ರಂದು ವಿಚಾರಣೆಗೆ ಜಿಲ್ಲಾಧಿಕಾರಿ ಎದುರು ಹಾಜರಾದರು.

ಈ ವೇಳೆ ಕೆಆರ್‌ಎಸ್‌ ಸುತ್ತ ಗಣಿಗಾರಿಕೆ ನಿಷೇಧಿಸಿರುವುದರಿಂದ ನಮಗೆ ಬಹಳ ತೊಂದರೆಯಾಗಿದೆ. ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ನಿಷೇಧಾಜ್ಞೆ ಜಾರಿ ಮಾಡಿರುವ ಉದ್ದೇಶ ನಮಗೆ ತಿಳಿಯದಾಗಿದೆ ಎಂದು ಜಿಲ್ಲಾಧಿಕಾರಿಗಳೆದುರು ತಿಳಿಸಿದ್ದಾರೆ.

ಒಂದು ವಾರ ಕಾಲಾವಕಾಶ: ಕೊನೆಗೆ ಗಣಿ ಮಾಲೀಕರು ಈ ವಿಷಯವಾಗಿ ನಮ್ಮ ಪರ ವಕೀಲರು ನಿಮ್ಮೆದುರು ಹಾಜರಾಗಿ ವಾದ ಮಂಡಿಸಲಿದ್ದಾರೆ ಎಂದು ತಿಳಿಸಿದಾಗ, ಜಿಲ್ಲಾಧಿಕಾರಿಗಳು ಗಣಿ ಮಾಲೀಕರ ಪರ ವಕೀಲರು ಹಾಜರಾಗಿ ಹೇಳಿಕೆ ನೀಡುವುದಕ್ಕೆ ಒಂದು ವಾರ ಕಾಲಾವಕಾಶ ನೀಡಿದ್ದಾರೆ. ಅಷ್ಟರೊಳಗೆ ವಕೀಲರು ಹಾಜರಾಗಿ ಹೇಳಿಕೆ ದಾಖಲಿಸಲು ಸೂಚನೆ ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ಮರೆ ಮಾಚಿ ಕಲ್ಲು ಗಣಿ ಮಾಲೀಕರು ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಆರಂಭಿಸಿದ್ದರಾದರೂ ಜಿಲ್ಲಾಡಳಿತ ಅದಕ್ಕೆ ಅವಕಾಶ ನೀಡದೆ ಬಂದ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next