Advertisement

High Court ಪರಶುರಾಮನ ಪ್ರತಿಮೆ ಕೇಸ್‌: ತೀರ್ಪು ಮೀಸಲು

11:59 PM Sep 11, 2024 | Team Udayavani |

ಬೆಂಗಳೂರು: ಕಾರ್ಕಳ ತಾಲೂಕಿನ ಉಮಿಕಲ್‌ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಶಿಲ್ಪ ಕಲಾವಿದ ಹಾಗೂ ಕ್ರಿಷ್‌ ಆರ್ಟ್‌ ವರ್ಲ್ಡ್ ಮುಖ್ಯಸ್ಥ ಕೃಷ್ಣ ನಾಯಕ್‌ ವಿರುದ್ಧ ದಾಖಲಿಸಲಾಗಿರುವ ಕ್ರಿಮಿನಲ್‌ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪನ್ನು ಕಾದಿರಿಸಿದೆ.

Advertisement

ಪ್ರಕರಣ ಸಂಬಂಧ ಕಾರ್ಕಳ ಟೌನ್‌ ಪೊಲೀಸರು ದಾಖಲಿಸಿರುವ ಎಫ್ಐಆರ್‌ ಹಾಗೂ ಕಾರ್ಕಳ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಕೃಷ್ಣ ನಾಯಕ್‌ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ವಾದ-ಪ್ರತಿವಾದ ಆಲಿಸಿದ ಬಳಿಕ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಪೀಠ ತೀರ್ಪನ್ನು ಕಾದಿರಿಸಿ ಆದೇಶಿಸಿತು. ಇದೇ ವೇಳೆ ಕೃಷ್ಣ ನಾಕಯ್‌ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಆಗಸ್ಟ್‌ 20ರಂದು ನೀಡಿದ್ದ ಮಧ್ಯಾಂತರ ತಡೆಯಾಜ್ಞೆಯನ್ನು ನ್ಯಾಯಪೀಠ ವಿಸ್ತರಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್‌ ಶ್ಯಾಮ್‌, ಪ್ರಾಸಿಕ್ಯೂಷನ್‌ ಪರ ಹೆಚ್ಚುವರಿ ಎಸ್‌ಪಿಪಿ ಬಿ.ಎನ್‌. ಜಗದೀಶ್‌, ದೂರುದಾರರ ಪರ ವಿ.ಕೆ. ಶ್ರೀಕಾಂತ್‌, ನಿರ್ಮಿತಿ ಕೇಂದ್ರದ ಪರ ದಿನೇಶ ಹೆಗ್ಡೆ ಉಳೆಪಾಡಿ ವಾದ ಮಂಡಿಸಿದರು.

ಸಾರ್ವಜನಿಕರ ಹಣ ಲೂಟಿ
ಪರಶುರಾಮನ ಪ್ರತಿಮೆ ನಿರ್ಮಾಣದ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಅಲ್ಲದೆ ಇದೇ ವಿಚಾರವಾಗಿ ಅರ್ಜಿದಾರರ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

Advertisement

ಅರ್ಜಿದಾರರ ವಕೀಲರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಪ್ರತಿಮೆ ನಿರ್ಮಾಣಕ್ಕೆ ಯಾವ ವಸ್ತು ಬಳಸಲು ಹೇಳಲಾಗಿತ್ತು ಎಂದು ಕೇಳಿದರು. ವಕೀಲರ ಸ್ಪಷ್ಟನೆ ಒಪ್ಪದ ನ್ಯಾಯಮೂರ್ತಿಗಳು, ಕಂಚಿನ ಬದಲು ಬೇರೆ ವಸ್ತು ಬಳಸಿದ್ದು ಯಾಕೆ ಎಂದು ಕೇಳಿದರು. ಅದಕ್ಕೆ ಕಂಚಾಗಿ ಪರಿವರ್ತಿಸಲು ತಾಮ್ರ ಮತ್ತು ಹಿತ್ತಾಳೆ ಬಳಸಲಾಗಿದೆ ಎಂದು ಹಿರಿಯ ವಕೀಲರು ಸಮಜಾಯಿಷಿ ನೀಡಿದರು. ಅದರಿಂದ ಸಿಟ್ಟಿಗೆದ್ದ ನ್ಯಾಯಮೂರ್ತಿಗಳು ಪ್ರತಿಮೆ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರ ಹಣ ಲೂಟಿ ಆಗಿದೆ ಅಷ್ಟೇ ಎಂದು ಖಾರವಾಗಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next