ಬೆಂಗಳೂರು: ವಿಶ್ವವಿದ್ಯಾಲಯ ನಿಗದಿಪಡಿಸಿದ್ದ ನಿರ್ದಿಷ್ಟ ವಿಷಯ ಆಯ್ಕೆ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಖಾಸಗಿ ಕಾಲೇಜಿನ 2016ನೇ ಸಾಲಿನ ಎಂ.ಕಾಂ ವಿದ್ಯಾರ್ಥಿಗಳ ಮೂರನೇ ಸೆಮಿಸ್ಟರ್ ಫಲಿತಾಂಶ ತಡೆಹಿಡಿದಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ವಿಶ್ವವಿದ್ಯಾಲಯದ ಕ್ರಮ ಪ್ರಶ್ನಿಸಿ 30 ಮಂದಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ಮುಂದಿನ ನಾಲ್ಕು ವಾರಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿತು.
ಜತೆಗೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿರುವ ವಿಷಯ ಆಯ್ಕೆ ಕುರಿತು, ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಸ್ಪಷ್ಟವಾಗಿ ಹೊಸ ಅಧಿಸೂಚನೆ ಹೊರಡಿಸಲು ಕ್ರಮ ವಹಿಸುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ವಿಶ್ವವಿದ್ಯಾಲಯ ಕಾರ್ಯವೈಖರಿ ಬಗ್ಗೆಯೂ ಅತೃಪ್ತಿ ವ್ಯಕ್ತಪಡಿಸಿದ ಪೀಠ, ಬೆಂಗಳೂರು ವಿವಿ ನಿಖರ ನಿರ್ಧಾರ ತೆಗೆದುಕೊಳ್ಳುವಂತೆ ತಾಕೀತು ಮಾಡಿತು.ಅರ್ಜಿದಾರ ವಿದ್ಯಾರ್ಥಿಗಳ ಪರ ವಕೀಲ ಸುರೇಶ್ ಬಾಬು ಬಿ.ಎನ್ ವಾದ ಮಂಡಿಸಿದ್ದರು.
ಫಲಿತಾಂಶ ತಡೆ ಯಾಕೆ?: ಸ್ನಾತಕೋತ್ತರ ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್‌ನಲ್ಲಿ ಕಡ್ಡಾಯವಾಗಿ ವಿಶ್ವವಿದ್ಯಾಲಯ ನಿಗದಿಪಡಿಸಿದ್ದ ವಿಷಯವನ್ನು ಆಯ್ಕೆ ಮಾಡಿಕೊಂಡು ತೇರ್ಗಡೆಯಾಗಬೇಕು ಎಂದು 2015ರಲ್ಲಿ ಬೆಂಗಳೂರು ವಿವಿ ಅಧಿಸೂಚನೆ ಹೊರಡಿಸಿತ್ತು.
ಈ ಪೈಕಿ ಎಂಕಾಂ ವಿದ್ಯಾರ್ಥಿಗಳಿಗೆ ಫೈನಾನ್ಸ್ ಅಂಡ್ ಬ್ಯಾಂಕಿಂಗ್, ಬೇಸಿಕ್ಸ್ ಆಫ್ ಇನ್ ಕಾಮ್ಸ್ ಟ್ಯಾಕ್ಸ್ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಾರದು ಎಂಬ ನಿಯಮವಿತ್ತು. ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಫೈನಾನ್ಸ್ ಆ್ಯಂಡ್ ಬ್ಯಾಂಕಿಂಗ್ ವಿಷಯವನ್ನು ಆಯ್ಕೆಮಾಡಿಕೊಂಡು 2016ರ ಡಿಸೆಂಬರ್‌ನಲ್ಲಿ ಪರೀಕ್ಷೆ ಬರೆದಿದ್ದರು. ಇದಕ್ಕೆ ಆಕ್ಷೇಪವ್ಯಕ್ತಪಡಿಸಿದ್ದ ವಿಶ್ವವಿದ್ಯಾಲಯ ಫಲಿತಾಂಶ ತಡೆಹಿಡಿದಿತ್ತು.