Advertisement

ಪ್ರವಾಸಿ ವೀಸಾ ಪಡೆದು ಧರ್ಮಪ್ರಚಾರ: 9 ಮಂದಿ ತಬ್ಲಿಘಿ ವಿದೇಶಿಯರಿಗೆ ನಿರ್ಬಂಧ

03:30 AM Aug 09, 2020 | Hari Prasad |

ಬೆಂಗಳೂರು: ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದು ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಹಿನ್ನೆಲೆಯಲ್ಲಿ ತಬ್ಲಿಘಿ ಜಮಾತ್‌ ಸಂಘಟನೆಯ 9 ಮಂದಿ ವಿದೇಶಿಯರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ರದ್ದುಪಡಿಸಿರುವ ಹೈಕೋರ್ಟ್‌, ಎಲ್ಲ ವಿದೇಶೀಯರು ತತ್‌ಕ್ಷಣ ದೇಶ ಬಿಟ್ಟು ತೆರಳಬೇಕು ಹಾಗೂ ಮುಂದಿನ 10 ವರ್ಷ ಭಾರತಕ್ಕೆ ಭೇಟಿ ನೀಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಡಬೇಕೆಂದು ಷರತ್ತು ವಿಧಿಸಿ ಆದೇಶಿಸಿದೆ.

Advertisement

ವೀಸಾ ನಿಯಮ ಉಲ್ಲಂಘನೆ ಆರೋಪದಲ್ಲಿ ತುಮಕೂರು ನಗರ ಪೊಲೀಸರು ದಾಖಲಿಸಿದ್ದ ಪ್ರಕರಣ ರದ್ದು ಕೋರಿ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನ ಫರ್ಹಾನ್‌ ಹುಸೈನ್‌, ಇಂಡೋನೇಶ್ಯಾದ ರೆಜೋ ಸಹಿತ 9 ಮಂದಿ ವಿದೇಶಿಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾದಿರಿಸಿದ್ದ ತೀರ್ಪನ್ನು ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ನ್ಯಾಯಪೀಠ ಪ್ರಕಟಿಸಿದೆ.

ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿರುವ ಹೈಕೋರ್ಟ್‌, ಬೇರೆ ಯಾವುದೇ ಪ್ರಕರಣದಲ್ಲಿ ಅರ್ಜಿದಾರರ ವಿಚಾರಣೆ ನಡೆಸುವ ಅಗತ್ಯವಿಲ್ಲದಿದ್ದಲ್ಲಿ ತತ್‌ಕ್ಷಣವೇ ಅವರಿಗೆ ದೇಶಬಿಟ್ಟು ತೆರಳಲು ಅನುಮತಿ ನೀಡಬೇಕು. ಈ ವೇಳೆ, ಅರ್ಜಿ ದಾರರ ವಿರುದ್ಧದ ಆರೋಪಗಳ ವಿಚಾರಣೆ ನಡೆಸುತ್ತಿರುವ ಸಕ್ಷಮ ಪ್ರಾಧಿಕಾರ ವಿಧಿಸುವ ದಂಡ ಪಾವತಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಇದೇ ಪ್ರಕರಣ ರದ್ದು ಕೋರಿ 7 ಮಂದಿ ಸ್ಥಳೀಯರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್‌, ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಮುಂದಿನ ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ಅನುಪಾಲನ ವರದಿಯನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ಗೆ ಸಲ್ಲಿಸಬೇಕೆಂದು ಪೊಲೀಸರಿಗೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next