Advertisement

ಮಕ್ಕಳ ನಾಪತ್ತೆ: ವರದಿ ನೀಡಲು ಹೈಕೋರ್ಟ್‌ಆದೇಶ

10:17 PM Feb 22, 2022 | Team Udayavani |

ಬೆಂಗಳೂರು: ಸರಕಾರಿ ಬಾಲಮಂದಿರಗಳಿಂದ ಕಳೆದ ಕೆಲ ವರ್ಷಗಳಿಂದ ಕಣ್ಮರೆಯಾಗಿರುವ 141 ಮಕ್ಕಳನ್ನು ಪತ್ತೆ ಹಚ್ಚಲು ಕೈಗೊಂಡಿರುವ ತನಿಖೆಯ ಸಮಗ್ರ ವಿವರಗಳನ್ನು ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು. ಅಲ್ಲದೇ ಸರಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಮಾ. 9ಕ್ಕೆ ಮುಂದೂಡಿತು.

141 ಮಕ್ಕಳು ಪತ್ತೆಯಾಗಿಲ್ಲ
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಸ್‌.ಉಮಾಪತಿ, ಅರ್ಜಿದಾರರು ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಮಾಹಿತಿಯಂತೆ 2015-16ರಿಂದ 2021ರ ಅಕ್ಟೋಬರ್‌ವರೆಗೆ ರಾಜ್ಯದ ಸರಕಾರಿ ಬಾಲ ಮಂದಿರಗಳಿಂದ 400ಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದು, ಎಫ್‌ಐಆರ್‌ ದಾಖಲಾಗಿವೆ. ಆದರೆ ಈವರೆಗೂ ಇನ್ನೂ 141 ಮಕ್ಕಳು ಪತ್ತೆಯಾಗಿಲ್ಲ. ಆ ಬಗ್ಗೆ ಪೊಲೀಸರು ತನಿಖೆಯನ್ನೂ ನಡೆಸಿಲ್ಲ ಎಂದು ಹೇಳಿದರು.

ಪೊಲೀಸರು ತಲೆಕೆಡಿಸಿಕೊಂಡಿಲ್ಲ
ಮಕ್ಕಳ ನಾಪತ್ತೆ ವಿಚಾರದಲ್ಲಿ ಸಿಸಿಐಗಳ ಗಂಭೀರ ಲೋಪ ಎದ್ದು ಕಾಣುತ್ತಿದೆ. ಪೊಲೀಸರೂ ಕೂಡ ನಾಪತ್ತೆಯಾದ ಮಕ್ಕಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬಾಲ ನ್ಯಾಯ ಕಾಯ್ದೆ ಪ್ರಕಾರ ಪ್ರತಿಯೊಂದು ಪೊಲೀಸ್‌ ಠಾಣೆಯಲ್ಲೂ ಮಕ್ಕಳ ನಾಪತ್ತೆ ಪ್ರಕರಣಗಳಿಗಾಗಿ ಪ್ರತ್ಯೇಕ ಪೊಲೀಸ್‌ ಘಟಕಗಳನ್ನು ಹೊಂದಿರಬೇಕು. ಆದರೆ ರಾಜ್ಯದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಈ ವಿಚಾರದಲ್ಲಿ ಸರಕಾರ ವಿಫಲವಾಗಿದೆ. ಹಾಗಾಗಿ, ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಬೇಕು ಎಂದು ವಕೀಲರು ಕೋರಿದರು.

ವಾದ ಆಲಿಸಿದ ಬಳಿಕ, ಅರ್ಜಿದಾರರು ಆರ್‌ಟಿಐನಡಿ ಸರಕಾರದಿಂದ ಪಡೆದಿರುವ ಮಾಹಿತಿಯಂತೆ ಸರಕಾರಿ ಮಕ್ಕಳ ಆರೈಕೆ ಕೇಂದ್ರಗಳಿಂದ ಕಣ್ಮರೆಯಾಗಿರುವ 141 ಮಕ್ಕಳನ್ನು ಪತ್ತೆ ಹಚ್ಚಲು ಏನೇನು ಕ್ರಮ ಕೈಗೊಳ್ಳಲಾಗಿದೆ, ಆ ಪ್ರಕರಣಗಳ ತನಿಖೆಯ ಸ್ಥಿತಿಗತಿಯ ವಿವರವನ್ನು ಸರಕಾರ ಮುಂದಿನ ವಿಚಾರಣೆ ವೇಳೆ ನೀಡಬೇಕು ಎಂದು ನ್ಯಾಯಪೀಠ ಹೇಳಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next