Advertisement

ಗಡಿ ಬಂದ್‌ ತೆರವಿಗೆ ಹೈಕೋರ್ಟ್‌ ಆದೇಶ

10:59 PM Aug 26, 2020 | mahesh |

ಕಾಸರಗೋಡು: ಕೇರಳ-ಕರ್ನಾಟಕ ರಾಜ್ಯಗಳ ಪ್ರಮುಖ ನಾಲ್ಕು ರಸ್ತೆಗಳಲ್ಲಿ ಗಡಿ ಬಂದ್‌ ತೆರವುಗೊಳಿಸುವಂತೆ ಕೇರಳ ಸರಕಾರಕ್ಕೆ ರಾಜ್ಯ ಹೈಕೋರ್ಟ್‌ ಬುಧವಾರ ಮಹತ್ವದ ಆದೇಶ ನೀಡಿದೆ.

Advertisement

ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ. ಶ್ರಿಕಾಂತ್‌ ಅವರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ರಾಜ್ಯ ಉತ್ಛ ನ್ಯಾಯಾಲಯವು ಕೇರಳ ಸರಕಾರಕ್ಕೆ ಈ ಮಧ್ಯಾಂತರ ಆದೇಶ ನೀಡಿದೆ.

ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ಜಾಲೂÕರು, ಪಾಣತ್ತೂರು, ಮಾಣಿಮೂಲೆ, ಪೆರ್ಲ ಗಡಿಗಳಲ್ಲಿ ವಿಧಿಸಲಾಗಿರುವ ಬಂದ್‌ ತೆರವುಗೊಳಿಸುವಂತೆ ನ್ಯಾಯಾಲಯವು ಸೂಚನೆ ನೀಡಿದೆ. ಕಳೆದ ಮೂರು ದಿನಗಳ ಹಿಂದೆ ದೇಶಾದ್ಯಂತ ಅಂತಾರಾಜ್ಯ ರಸ್ತೆಗಳ ಬಂದ್‌ ತೆರವುಗೊಳಿಸುವಂತೆ ಕೇಂದ್ರ ಸರಕಾರವು ಎಲ್ಲ ರಾಜ್ಯಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿತ್ತು. ಆದರೂ ಕೇರಳ ಸರಕಾರ ಮಾತ್ರ ಗಡಿ ಬಂದ್‌ ತೆರವುಗೊಳಿಸಿರಲಿಲ್ಲ. ಇದೀಗ ಈ ಆದೇಶದಿಂದ ಅಂತಾರಾಜ್ಯ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ದೊರೆತಂತಾಗಿದೆ. ಹೈಕೋರ್ಟ್‌ನ ಈ ಆದೇಶವು ಕಾಸರಗೋಡು -ದಕ್ಷಿಣ ಕನ್ನಡ ಜಿಲ್ಲೆಗಳ ಜನತೆಯಲ್ಲಿ ಸಂತಸ ಮೂಡುವಂತೆ ಮಾಡಿದೆ.

ರೆಗ್ಯುಲರ್‌ ಪಾಸ್‌ ಅಗತ್ಯವಿಲ್ಲ: ಡಿಸಿ
ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳಿ ಮರಳುವ ದಿನನಿತ್ಯದ ಪ್ರಯಾಣಕ್ಕೆ ಇನ್ನು ಮುಂದೆ ರೆಗ್ಯುಲರ್‌ ಪಾಸ್‌ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ತಿಳಿಸಿದರು. ಈ ಸಂಬಂಧ ಈಗ ಜಾರಿಯಲ್ಲಿರುವ ಆದೇಶವನ್ನು ಹಿಂದೆಗೆದುಕೊಳ್ಳಲಾಗಿದೆ.

ಕರ್ನಾಟಕಕ್ಕೆ ತೆರಳಲು ಅನುಮತಿ
ಈಗ ಪ್ರಯಾಣಕ್ಕೆ ಅನುಮತಿ ನೀಡಲಾಗಿರುವ ರಾಷ್ಟ್ರೀಯ ಹೆದ್ದಾರಿ 65 ಅಲ್ಲದೆ (ತಲಪಾಡಿ ಚೆಕ್‌ ಪೋಸ್ಟ್‌) ಪೆರ್ಲ, ಜಾಲಸೂರು, ಮಾಣಿಮೂಲೆ, ಪಾಣತ್ತೂರು ರಸ್ತೆಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಲು ಅನುಮತಿ ನೀಡಿರುವುದಾಗಿ ಜಿಲ್ಲಾಧಿಕಾರಿ ಸಭೆಯಲ್ಲಿ ಹೇಳಿದರು. ಈ ರಸ್ತೆಗಳಲ್ಲಿ ಪ್ರಯಾಣಿಸುವ ಮಂದಿ ಕೂಡ ಆ್ಯಂಟಿಜೆನ್‌ ಟೆಸ್ಟ್‌ ನಡೆಸಿ ನೆಗೆಟಿವ್‌ ಸರ್ಟಿಫಿಕೆಟ್‌ ಸಹಿತ ಕೋವಿಡ್‌ 19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಣಿ ನಡೆಸಬೇಕು.ಇದಕ್ಕಾಗಿ ಜಿಲ್ಲಾ ವೈದ್ಯಾಧಿಕಾರಿ ತಲಪಾಡಿ ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆ ಸೌಲಭ್ಯ ಏರ್ಪಡಿಸಲಿದ್ದಾರೆ. ಈ ರಸ್ತೆಗಳ ಗಡಿ ಹೊಂದಿರುವ ಗ್ರಾಮ ಪಂಚಾಯತ್‌ಗಳು ತಪಾಸಣೆಗೆ ಅಗತ್ಯವಿರುವ ಸೌಲಭ್ಯ ಏರ್ಪಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

ಗಡಿ ನಿವಾಸಿಗಳಿಗೆ ನೋಂದಣಿ ಬೇಡ
ಪೆರ್ಲ, ಜಾಲಸೂರು , ಮಾಣಿಮೂಲೆ, ಪಾಣತ್ತೂರು ರಸ್ತೆಗಳ ಗಡಿ ಪ್ರದೇಶಗಳ ಗ್ರಾ. ಪಂ. ನಿವಾಸಿಗಳು ಜಿಲ್ಲೆಗೆ ಪ್ರವೇಶ ಮಾಡುವುದಿದ್ದರೆ ನೋಂದಣಿಯ ಅಗತ್ಯವಿಲ್ಲ. ಆದರೆ ಆ ವ್ಯಕ್ತಿ ಆಯಾ ಗ್ರಾ. ಪಂ. ವ್ಯಾಪ್ತಿ ಬಿಟ್ಟು ಇತರ ಗ್ರಾ. ಪಂ.ಗೆ ಪ್ರವೇಶಿಸ ಕೂಡದು ಎಂಬುದನ್ನು ಖಚಿತಪಡಿಸುವ ಹೊಣೆ ಸಂಬಂಧಪಟ್ಟ ಗ್ರಾ. ಪಂ.ಗಳದು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.

ರಾಜ್ಯ ಸರಕಾರದ ನೂತನ ಆದೇಶ ಪ್ರಕಾರ ಸೆ. 2ರವರೆಗೆ ಅಂಗಡಿಗಳು, ವ್ಯಾಪಾರ ಸಂಸ್ಥೆಗಳೂ ರಾತ್ರಿ 9 ಗಂಟೆವರೆಗೆ ತೆರೆದು ಚಟುವಟಿಕೆ ನಡೆಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next