Advertisement

ಕಾಲೇಜುಗಳಲ್ಲಿ ಹೈಕೋರ್ಟ್‌ ಆದೇಶ ಪಾಲನೆ; ಹಾಜರಾಗದ ವಿದ್ಯಾರ್ಥಿಗಳಿಗೆ ಬದಲಿ ವ್ಯವಸ್ಥೆ ಚಿಂತನೆ

12:32 AM Feb 17, 2022 | Team Udayavani |

ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ಪಿಯುಸಿ ಮತ್ತು ಪದವಿ ತರಗತಿಗಳು ಆರಂಭಗೊಂಡವು. ಹಿಜಾಬ್‌ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸಿದ ಕಾರಣ ಕೆಲವು ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದು ಹಾಜರಾದರೆ ಇನ್ನು ಕೆಲವರು ಹೈಕೋರ್ಟ್‌ ತೀರ್ಪು ಬಂದ ಬಳಿಕ ಹಾಜರಾಗುವುದಾಗಿ ತಿಳಿಸಿದರು.

Advertisement

ಉಡುಪಿ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ 6 ವಿದ್ಯಾರ್ಥಿನಿ ಯರು ತರಗತಿಗೆ ಗೈರು ಹಾಜರಾಗಿದ್ದರು. ಉಳಿದವರು ಕಾಲೇಜು ಆವರಣದೊಳಗೆ ಹಿಜಾಬ್‌ ಧರಿಸಿ ಬಂದಿದ್ದರೂ ತರಗತಿಯಲ್ಲಿ ತೆಗೆದಿದ್ದರು. ಸ್ಥಳೀಯ ಹಬ್ಬದ ಪ್ರಯುಕ್ತ ನಾವುಂದ ಸರಕಾರಿ ಪ.ಪೂ. ಕಾಲೇಜಿಗೆ ರಜೆ ಘೋಷಿಸಲಾಗಿತ್ತು.

ಮಹಿಳಾ ಕಾಲೇಜಿನಲ್ಲಿ ಗೊಂದಲ
ಅಜ್ಜರಕಾಡು ಡಾ| ಜಿ. ಶಂಕರ್‌ ಸರಕಾರಿ ಮ.ಪ್ರ.ದ. ಕಾಲೇಜಿನಲ್ಲಿ 196 ಮುಸ್ಲಿಂ ವಿದ್ಯಾರ್ಥಿನಿಯರಿ¨ªಾರೆ. ಇವರಲ್ಲಿ 40 ಮಂದಿ ನಿತ್ಯ ಹಿಜಾಬ್‌ ಧರಿಸುತ್ತಿದ್ದರು. ಬುಧವಾರ 20 ಮಂದಿ ಮಾತ್ರ ಕಾಲೇಜಿಗೆ ಬಂದಿದ್ದರು. ಮಾತುಕತೆಯ ಅನಂತರ 10 ಮಂದಿ ಹಿಜಾಬ್‌ ತೆಗೆದು ತರಗತಿಗೆ ಹಾಜರಾಗಿದ್ದರು. ಉಳಿದವರು ತರಗತಿ ಬಹಿಷ್ಕರಿಸಿ ಮನೆಗೆ ತೆರಳಿದರು.

ಪರ್ಯಾಯ ವ್ಯವಸ್ಥೆ
ಹೈಕೋರ್ಟ್‌ ಆದೇಶದ ಬಗ್ಗೆ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಲಾಗಿದೆ. ಕೋರ್ಟ್‌ ಆದೇಶ ಬರುವವರೆಗೆ ಕಾದು ನೋಡುವುದಾಗಿ ತಿಳಿಸಿದ್ದಾರೆ. ಅವರೇ ಸ್ವಯಂಪ್ರೇರಿತರಾಗಿ ಮನೆಗೆ ತೆರಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ತರಗತಿಗೆ ಬಾರದವರಿಗೆ ಪರ್ಯಾಯ ವ್ಯವಸ್ಥೆ ಮಾಡಲಿದ್ದೇವೆ. ಹೈಕೋರ್ಟ್‌ ಅಂತಿಮ ಆದೇಶದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಲಾಗುವುದು ಎಂದು ಅಜ್ಜರಕಾಡು ಸ.ಮ. ಕಾಲೇಜಿನ ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ ತಿಳಿಸಿದ್ದಾರೆ.

ನಮ್ಮ ಕಾಲೇಜಿನಲ್ಲಿ ಮೊದಲಿನಿಂದಲೂ ಹಿಜಾಬ್‌ ಧರಿಸಲು ಅವಕಾಶವಿತ್ತು. ಈಗ ಕೋರ್ಟ್‌ ಆದೇಶದ ನೆಪದಲ್ಲಿ ನಿರಾಕರಿಸಲಾಗುತ್ತಿದೆ. ನಾವು ಅಂತಿಮ ತೀರ್ಪು ಬರುವವರೆಗೆ ಕಾಯುತ್ತೇವೆ. ಇಲ್ಲದಿದ್ದರೆ ಟಿಸಿ ತೆಗೆದುಕೊಳ್ಳುತ್ತೇನೆ ಎಂದು ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಅಫ್ರಾ ಅಜ್ಮಲ್‌ ಅಸ್ಸಾದಿ ತಿಳಿಸಿದರು.

Advertisement

ಬಿಗಿ ಬಂದೋಬಸ್ತ್
ಸೂಕ್ಷ್ಮ ಪ್ರದೇಶಗಳ ಎಲ್ಲ ಕಾಲೇಜುಗಳಿಗೂ ಪೊಲೀಸ್‌ ಸಿಬಂದಿ ನಿಯೋಜಿಸಲಾಗಿತ್ತು. 8 ಡಿಎಆರ್‌, 2 ಕೆಎಸ್‌ಆರ್‌ಪಿ, 4 ಮಂದಿ ಡಿವೈಎಸ್‌ಪಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, 11 ಇನ್‌ಸ್ಪೆಕ್ಟರ್‌, 36 ಪಿಎಸ್‌ಐ ಮತ್ತು ಎಎಸ್‌ಐ, ಕಾನ್‌ಸ್ಟೆಬಲ್‌ ಸಹಿತ 700ಕ್ಕೂ ಅಧಿಕ ಸಿಬಂದಿ, 1 ಮಹಿಳಾ ಕೆಎಸ್‌ಆರ್‌ಪಿ ತುಕಡಿ ಭದ್ರತೆಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next