ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ನಿರ್ವಹಣೆಗಾಗಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಮೇಲ್ವಿಚಾರಣೆಗೆ ತಜ್ಞರ ಸಮಿತಿ ರಚಿಸುವ ಸಂಬಂಧ ಆದೇಶ ನೀಡಲು ನಿರಾಕರಿಸಿರುವ ಹೈಕೋರ್ಟ್, ಈ ವಿಚಾರದಲ್ಲಿ ಅಗತ್ಯ ಸಲಹೆ ನೀಡಲು ತಜ್ಞರು ಯಾರಾದರೂ ಸ್ವಯಂಪ್ರೇರಿತವಾಗಿ ಮುಂದೆ ಬಂದರೆ ಅವರ ಸಲಹೆಯನ್ನು ಸರಕಾರ ಒಪ್ಪಿಕೊಳ್ಳುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟಿದೆ.
ಧಾರವಾಡದ ಎ-ಫೋರಂ ಸಲ್ಲಿಸಿದ್ದ ಪಿಐಎಲ್‌ನ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.ಕೋವಿಡ್-19 ಹರಡುವಿಕೆ ತಡೆಗೆ ದೀರ್ಘಕಾಲಿಕ ಪರಿಹಾರ ಕಂಡುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯ ಸಂಶೋಧನೆ ನಡೆಸುತ್ತಿದ್ದು, ಈ ವಿಚಾರದಲ್ಲಿ ಸರಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಹೇಳಲು ಸಾಧ್ಯ
ವಿಲ್ಲ. ಈ ಹಂತದಲ್ಲಿ ತಜ್ಞರ ಸಮಿತಿ ರಚನೆ ಮಾಡಿದರೆ ಸರಕಾರದ ಕಾರ್ಯಗಳಿಗೆ ಅಡ್ಡಿಪಡಿಸಿದಂತಾಗುತ್ತದೆ. ಸರಕಾರ ಕಾಲಕಾಲಕ್ಕೆ ಕೈಗೊಂಡಿರುವ ಕ್ರಮಗಳಲ್ಲಿ ಮಧ್ಯ ಪ್ರವೇಶ ಮಾಡಿದಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.
ಹೆಚ್ಚವರಿ ಪ್ರಯೋಗಾಲಯ ಸ್ಥಾಪನೆ ಮತ್ತು ತಜ್ಞರ ಬಳಕೆ ಸಂಬಂಧ ಅರ್ಜಿದಾರರು ಒಪ್ಪಬಹುದಾದ ಸಲಹೆಗಳನ್ನು ನೀಡಿದ್ದರೆ ಸರಕಾರಗಳು ಪರಿಗಣಿಸಬಹುದು. ಜತೆಗೆ ಕೋವಿಡ್-19 ಪ್ರಕರಣಗಳ ಸಂಬಂಧ ಅಗತ್ಯ ಸಲಹೆ ನೀಡಲು ತಜ್ಞರು ಸ್ವಯಂಪ್ರೇರಿತವಾಗಿ ಮುಂದೆ ಬಂದರೆ ಅವರ ಸಲಹೆಯನ್ನು ಸರಕಾರ ಅದನ್ನು ಪರಿಗಣಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ಅರ್ಜಿ ಇತ್ಯರ್ಥಪಡಿಸಿತು.