ಬೆಂಗಳೂರು: ಬೇರೆಯವರನ್ನು ತತ್‌ಕ್ಷಣ ಅನರ್ಹಗೊಳಿಸಬಹುದಾದರೆ ಶಾಸಕ ನೆಹರು ಓಲೇಕಾರ್ ಅವರನ್ನು ಇನ್ನೂ ಅನರ್ಹಗೊಳಿಸಿಲ್ಲವೇಕೆ’? ಇದು ಹೈಕೋರ್ಟ್ ಕೇಳಿದ ತೀಕ್ಷ್ಣ ಪ್ರಶ್ನೆ.
ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ತೀರ್ಮಾನಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ| ಕೆ. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಓಲೇಕಾರ್ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರು ಕ್ರಿಮಿನಲ್ ಒಳಸಂಚು ರೂಪಿಸಿಲ್ಲ. ಅಧೀನ ನ್ಯಾಯಾಲಯದ ಆದೇಶ ದೋಷಪೂರಿತ ಆಗಿದೆಯೆಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂಬ ಅಭಿಪ್ರಾಯಕ್ಕೆ ಹೈಕೋರ್ಟ್ ಬಂದಿದೆ. ಇದೇ ಕಾರಣಕ್ಕೆ ಅರ್ಜಿದಾರರಿಗೆ ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ ಆದೇಶಕ್ಕೆ ತಡೆ ಸಹ ನೀಡಿದೆ. ಶಿಕ್ಷೆ ವಿಧಿಸಿದ ಆದೇಶವು ದೋಷಪೂರಿತವಾಗಿದೆ ಎಂದಾದರೆ ಅದರ ಪರಿಣಾಮಗಳನ್ನು ಆರೋಪಿ ಎದುರಿಸ ಬಾರದೆಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಅವರನ್ನು ದೋಷಿಯಾಗಿ ತೀರ್ಮಾನಿಸಿದ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆಯೇ ಎಂದು ಪ್ರಶ್ನಿಸಿತು. ಓಲೇಕಾರ ಪರ ವಕೀಲರು ಇಲ್ಲ ಎಂದು ಉತ್ತರಿಸಿದಾಗ, ಏಕೆ ಇನ್ನೂ ಅನರ್ಹಗೊಳಿಸಿಲ್ಲ? ಬೇರೆಯವರನ್ನು ತತ್‌ಕ್ಷಣವೇ ಅನರ್ಹಗೊಳಿಸಲಾಗುತ್ತದೆ ಎಂದು ನ್ಯಾಯಪೀಠ ಮರು ಪ್ರಶ್ನೆ ಹಾಕಿತು.
ಓಲೇಕಾರ್ ಪರ ವಕೀಲರು, ಶಾಸಕರನ್ನು ಅನರ್ಹ ಗೊಳಿಸುವ ವಿಚಾರ ಸ್ಪೀಕರ್ ಅವರ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ. ಅವರು ವಿವೇಚನೆ ಬಳಸಿ ತೀರ್ಮಾನ ಕೈಗೊಳ್ಳುತ್ತಾರೆ. ಆದರೆ, ದೋಷಿಯಾಗಿ ತೀರ್ಮಾನಿಸಿದ ವಿಶೇಷ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವ ವಿಚಾರಕ್ಕೂ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ವಿಚಾರಕ್ಕೆ ಸಂಬಂಧ ಇಲ್ಲ ಎಂದು ಸಮಜಾಯಿಷಿ ನೀಡಿದರು.
ಅರ್ಜಿದಾರರ ಮನವಿಯನ್ನು ಆಕ್ಷೇಪಿಸಿದ ಲೋಕಾಯುಕ್ತ ಪರ ವಕೀಲರು, ಕ್ರಿಮಿನಲ್ ಪ್ರಕರಣದಲ್ಲಿ ಚುನಾಯಿತ ಜನ ಪ್ರತಿನಿಧಿಗಳು ಎರಡು ವರ್ಷ ಕಾಲ ಶಿಕ್ಷೆ ಗುರಿಯಾದರೆ ಅವರ ಸ್ಥಾನ ತನ್ನಿಂದ ತಾನೇ ಅನರ್ಹತೆಯಾಗುತ್ತದೆ ಎಂದು ಸುಪ್ರಿಂಕೋರ್ಟ್ ತೀರ್ಪು ಸ್ಪಷ್ಟಪಡಿಸುತ್ತದೆ. ಆದ ಕಾರಣ ಅವರ ಮನವಿ ಪುರಸ್ಕರಿಸದೆ ಮಧ್ಯಾಂತರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ. ಓಲೇಕಾರ್ ಅವರನ್ನು ದೋಷಿಯಾಗಿ ತೀರ್ಮಾನಿಸಿರುವ ವಿಶೇಷ ನ್ಯಾಯಾಲಯದ ಆದೇಶಕ್ಕೆ ಒಂದೊಮ್ಮೆ ಹೈಕೋರ್ಟ್ ತಡೆ ನೀಡದೆ ಹೋದರೆ, ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕಾನೂನಾತ್ಮಕ ತೊಡಕು ಉಂಟಾಗಲಿದೆ.