ಬೆಂಗಳೂರು: ಪಚ್ಚನಾಡಿ ಭೂಭರ್ತಿ ಘಟಕದಲ್ಲಿ ಸಂಗ್ರಹವಾಗಿರುವ ಘನತ್ಯಾಜ್ಯವನ್ನು ತೆರವುಗೊಳಿಸಲು ಸಬೂಬು ಹೇಳುತ್ತಿರುವ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, “ಸಂವೇದನಾರಹಿತ ಸರಕಾರ’ ಎಂದು ಹೇಳಬೇಕೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು.
ಈ ವಿಚಾರವಾಗಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಸರಕಾರದ ಪರ ವಕೀಲರು ವಾದ ಮಂಡಿಸಿ, ಭೂಭರ್ತಿ ಘಟಕದಲ್ಲಿ ಬಹಳ ವರ್ಷಗಳಿಂದ ಶೇಖರಣೆಯಾಗಿರುವ ಘನತ್ಯಾಜ್ಯ ವಿಲೇವಾರಿಗಾಗಿ ಸರಕಾರ 73 ಕೋ. ರೂ. ಮಂಜೂರು ಮಾಡಿದೆ. ಇದಕ್ಕೆ ಸಚಿವ ಸಂಪುಟದ ಅನುಮೋದನೆ ಬೇಕಿದೆ. ವಿಲೇವಾರಿ ಮಾಡಲು ಕನಿಷ್ಠ ನಾಲ್ಕು ವರ್ಷ ಬೇಕು ಎಂದರು.
ಇದರಿಂದ ಕೋಪಗೊಂಡ ಮುಖ್ಯ ನ್ಯಾಯಮೂರ್ತಿಗಳು, ಫಲ್ಗುಣಿ ನದಿ, ಮರವೂರು ಡ್ಯಾಂ ನೀರು ವಿಷಪೂರಿತವಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ಜುಲೈಯಲ್ಲೇ ವರದಿ ಕೊಟ್ಟಿದೆ.
ಘನತ್ಯಾಜ್ಯದಿಂದಾಗಿ 19 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಿದ್ದರೂ ನಿಮಗೆ ಕಿಂಚಿತ್ತು ಕಾಳಜಿ ಇಲ್ಲ. ಆ ವಿಷಪೂರಿತ ನೀರು ನಿಮಗೆ ಮತ್ತು ಅಧಿಕಾರಿಗಳಿಗೆ ಕುಡಿಸಬೇಕು. ಆಗ ಗೊತ್ತಾಗುತ್ತದೆ. ಕಚೇರಿಗಳಲ್ಲಿ ಕುಳಿತು ಏನಾದರೂ ಸಬೂಬು ಹೇಳುವುದು ಸುಲಭ. ವರ್ಷದಿಂದ ಇದನ್ನೇ ಹೇಳುತ್ತಿದ್ದೀರಿ. ಹಾಗಾದರೆ, ಇದೊಂದು “ಸಂವೇದನಾರಹಿತ ಸರಕಾರ’ ಎಂದು ಕೋರ್ಟ್ ನಡಾವಳಿಯಲ್ಲಿ ದಾಖಲಿಸಬೇಕೇ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ಖಾಕಿ ಕಣ್ಗಾವಲಿನಲ್ಲಿ ಬನಹಟ್ಟಿ : ಶನಿವಾರದವರೆಗೆ ಸೆಕ್ಷನ್ 144 ಮುಂದೂಡಿಕೆ
ಮುಖ್ಯ ಕಾರ್ಯದರ್ಶಿಗೆ ಸೂಚನೆ
ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಕ್ರಮಗಳ ಪ್ರಗತಿ ಬಗ್ಗೆ ಮಾಹಿತಿ ನೀಡಲು 10 ದಿನ ಕಾಲಾವಕಾಶ ನೀಡುವಂತೆ ಸರಕಾರದ ಪರ ವಕೀಲರು ಮನವಿ ಮಾಡಿದರು. ಆಗ, ಸರಕಾರಕ್ಕೆ ಜನರ ಬಗ್ಗೆ ಕಾಳಜಿ ಇದ್ದಂ ತಿಲ್ಲ. ಪ್ರತಿಬಾರಿ ಒಂದಲ್ಲೊಂದು ಕಾರಣ ನೀಡ ಲಾಗುತ್ತದೆ. ಈಗ ಸಂಪುಟ ಅನುಮೋದನೆಯ ನೆಪ ಹೇಳಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಬಗ್ಗೆ ಸಾಧ್ಯವಿರುವ ಎಲ್ಲÉ ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದ ಹೈಕೋರ್ಟ್, ವಿಚಾರಣೆಯನ್ನು ಫೆ.23ಕ್ಕೆ ಮುಂದೂಡಿತು. ಅರ್ಜಿದಾರರ ಪರ ಶ್ರೀಧರ ಪ್ರಭು ವಾದಿಸಿದರು.