Advertisement

“ಮಠದಲ್ಲಿ ವಾಸ್ತವ್ಯಕ್ಕೆ ಕೊಟ್ಟ ಜಾಗದಲ್ಲಿ ಹಿಡುವಳಿ ಹಕ್ಕು ಪ್ರತಿಪಾದಿಸುವಂತಿಲ್ಲ’

10:28 PM Jan 10, 2022 | Team Udayavani |

ಬೆಂಗಳೂರು: ಮಠದಲ್ಲಿ ಕೆಲಸ ಮಾಡುವವರಿಗೆ ವಸತಿ ಉದ್ದೇಶಕ್ಕೆ ಮಠದಿಂದ ನೀಡಲಾದ ಜಮೀನಿನ ಮೇಲೆ ಹಿಡುವಳಿ ಹಕ್ಕು ಪ್ರತಿ ಪಾದಿಸುವಂತಿಲ್ಲ ಎಂದು ಆದೇಶಿಸಿರುವ ಹೈಕೋರ್ಟ್‌, ಅನರ್ಹ ಗೇಣಿದಾರರನ್ನು ತೋರಿಸಿ ಭೂ ಸುಧಾರಣ ಕಾಯ್ದೆಯನ್ನು ದುರ್ಬಳಕೆ ಮಾಡಿ ಕೊಳ್ಳಬಾರದೆಂದು ಸ್ಪಷ್ಟಪಡಿಸಿದೆ.

Advertisement

ಅಡುಗೆ ಕೆಲಸ ಮಾಡುತ್ತಿದ್ದ ಜಿ. ಅನಂತ ಭಟ್ಟ ಅವರಿಗೆ ವಾಸಕ್ಕಾಗಿ ನೀಡಿದ್ದ ಜಾಗ ಮತ್ತು ಮನೆಯ ಹಿಡುವಳಿಗೆ ಹಕ್ಕುಪತ್ರ ನೀಡಿ ಭೂ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉಡುಪಿಯ ಅದಮಾರು ಮಠ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾ| ಪಿ.ಎಸ್‌. ದಿನೇಶ್‌ ಕುಮಾರ್‌ ಹಾಗೂ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವ ರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಭೂ ಮಂಜೂರಾತಿ ಪ್ರಶ್ನಿಸಿ ಮಠ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್‌, ಕರ್ನಾಟಕ ಭೂ ಸುಧಾರಣ ಕಾಯ್ದೆ -1961 ಒಂದು ಪ್ರಯೋಜನಕಾರಿ ಶಾಸನವಾಗಿದೆ. ಭೂಮಿಯನ್ನು ಗೇಣಿಗೆ ಪಡೆದುಕೊಂಡು ಕೃಷಿಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿ ಗಳು ಫಾರಂ ನಂಬರ್‌ 7ರಲ್ಲಿ ಅರ್ಜಿ ಸಲ್ಲಿಸಿದರೆ ಅಂಥವರ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಅವರಿಗೆ ಪ್ರಯೋಜನವನ್ನು ಒದಗಿಸಿಕೊಡುವುದು ಕಾಯ್ದೆಯ ಉದ್ದೇಶ
ವಾಗಿದೆ. ಆದರೆ ಇದನ್ನು ದುರು ಪಯೋಗ ಪಡಿಸಿಕೊಳ್ಳಬಾರದು ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ; ಒಮಿಕ್ರಾನ್ ಏರಿಕೆ

ಈ ಪ್ರಕರಣದಲ್ಲಿ ಮಠವು ಭೂ ಮಾಲಕತ್ವ ಹೊಂದಿದ್ದು, ಅದು ಧಾರ್ಮಿಕ ಮತ್ತು ಚಾರಿಟೆಬಲ್‌ ಸಂಸ್ಥೆಯಾಗಿದೆ. ಆ ಭೂಮಿಯಿಂದ ಬರುವ ಪ್ರಯೋಜನಗಳನ್ನು ಮಠದ ಭಕ್ತರ ಸೌಕರ್ಯಕ್ಕೆ ಬಳಸಬೇಕು, ಭಕ್ತರ ಆಶಯವೂ ಅದೇ ಆಗಿರುತ್ತದೆ. ಹಾಗಾಗಿ, ಕೆಲಸಕ್ಕಿದ್ದವರಿಗೆ ವಾಸ ಮಾಡಲು ನೀಡುವ ಜಮೀನಿನ ಮೇಲೆ ಅವರು ಹಕ್ಕು ಸಾಧಿಸುವಂತಿಲ್ಲ ಎಂದೂ ಹೇಳಿದೆ.

Advertisement

ಭೂಮಿಯು ನಗರ ಪ್ರದೇಶದಲ್ಲಿದ್ದು, ಅದು ಕರ್ನಾಟಕ ಭೂ ಸುಧಾರಣ ಕಾಯ್ದೆ ಸೆಕ್ಷನ್‌ 2ಎ (18)ವ್ಯಾಪ್ತಿಗೆ ಒಳಪಡುವುದಿಲ್ಲ ಮತ್ತು ಮಠ ಹಾಗೂ ಅರ್ಜಿದಾರರ ನಡುವೆ ಗೇಣಿದಾರ ಸಂಬಂಧ ಇತ್ತು ಅನ್ನುವುದಕ್ಕೆ ಯಾವುದೇ ಲಿಖಿತ ದಾಖಲೆಗಳೂ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ
ಸದ್ಯ ಉಡುಪಿ ನಗರ ಭಾಗದಲ್ಲಿರುವ ಶಿವಳ್ಳಿ ಗ್ರಾಮದಲ್ಲಿ ಮಠಕ್ಕೆ ಸೇರಿ 3 ಸಾವಿರ ಚದರ ಅಡಿ ಜಾಗ ಮತ್ತು ಮನೆಯನ್ನು ಅಡುಗೆ ಕೆಲಸ ಮಾಡುತ್ತಿದ್ದ ಜಿ. ಅನಂತ ಭಟ್ಟ ಅವರಿಗೆ ಅದಮಾರು ಮಠ ನೀಡಿತ್ತು. ಬಳಿಕ ಅನಂತ ಭಟ್ಟರು ಭೂ ಸುಧಾರಣ ಕಾಯ್ದೆಯಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಭೂ ನ್ಯಾಯಮಂಡಳಿ ಹಕ್ಕು ಪತ್ರ ನೀಡಿತ್ತು. ಇದನ್ನು ಪ್ರಶ್ನಿಸಿ ಅದಮಾರು ಮಠ ಹೈಕೋರ್ಟ್‌ ಮೆಟ್ಟಿಲೇರಿತ್ತು. ಏಕಸದಸ್ಯ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿತ್ತು. ಹಾಗಾಗಿ, ಮಠವು ವಿಭಾಗೀಯ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next