Advertisement

ಸರಕು ವಾಹನದಲ್ಲಿ ಜನ: ಹೈ ಬೇಸರ

11:27 AM Mar 07, 2020 | Suhan S |

ಬೆಂಗಳೂರು: ಶಾಲಾ ಮಕ್ಕಳು, ಕಾರ್ಮಿಕರು ಹಾಗೂ ಜನಸಾಮಾನ್ಯರು ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಸುತ್ತಿರುವುದು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬುದಕ್ಕೆ ನಿದರ್ಶನ ಎಂದು ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿತು.

Advertisement

ಸರಕು ಸಾಗಣೆ ವಾಹನಗಳಲ್ಲಿ ಶಾಲಾ ಮಕ್ಕಳು ಸೇರಿದಂತೆ ಕಾರ್ಮಿಕರು ಹಾಗೂ ಸಾಮಾನ್ಯ ಪ್ರಯಾಣಿಕರನ್ನು ಕೊಂಡೊಯ್ಯುವುದನ್ನು ತಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಹಾಗೂ ನ್ಯಾ. ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಬಿಎಂಟಿಸಿ ಪರ ವಕೀಲರು ವಾದ ಮಂಡಿಸಿ, ನಗರದ ಬಹುತೇಕ ಕಡೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಅದರ ರೂಟ್‌ ಶೆಡ್ನೂಲ್‌ ಕೂಡ ಇದೆ. ಬೇರೆ ಬೇರೆ ಕಾರಣಗಳಿಗೆ ಶಾಲಾ ಮಕ್ಕಳು ಹಾಗೂ ಕಾರ್ಮಿಕರು ಸರಕು ವಾಹನಗಳಲ್ಲಿ ಪ್ರಯಾಣ ಮಾಡಲು ಬಯಸುತ್ತಾರೆ. ಯಾವುದಾದರೂ ಕಡೆ ಬಸ್‌ ವ್ಯವಸ್ಥೆ ಇಲ್ಲ ಎಂದು ಹೇಳಿದರೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಈ ಕುರಿತು ಅರ್ಜಿದಾರರ ಬಳಿ ಮಾಹಿತಿ ಅಥವಾ ಸಲಹೆಗಳ ಇದ್ದರೆ ಅದನ್ನು ನಮಗೆ ನೀಡಲಿ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅದನ್ನು ಆಕ್ಷೇಪಿಸಿದ ನ್ಯಾಯಪೀಠ, ಎಲ್ಲಾ ಕಡೆ ಸಾರಿಗೆ ವ್ಯವಸ್ಥೆ ಇದೆ ಎಂದು ನಿಮಗೆ ನೀವೇ ಸರ್ಟಿಫಿಕೇಟ್‌ ಕೊಟ್ಟುಕೊಂಡರೆ ಹೇಗೆ? ನಗರದಲ್ಲಿ ಸಾರ್ವಜನಿಕ ಸಾರಿಗೆಯ ಸ್ಥಿತಿಗತಿ ಹೇಗಿದೆ, ಬೇಡಿಕೆ ಎಷ್ಟಿದೆ, ಸಮಸ್ಯೆ ಎಲ್ಲಿ ಆಗುತ್ತಿದೆ, ಸಾರ್ವಜನಿಕರು ವಿಶೇಷವಾಗಿ ಶಾಲಾ ಮಕ್ಕಳು, ಕಾರ್ಮಿಕರು ಸರಕು ವಾಹನಗಳಲ್ಲಿ ಪ್ರಯಾಣಿಸಲು ಕಾರಣಗಳೇನು ಎಂಬ ಬಗ್ಗೆ ಅಧ್ಯಯನ ನಡೆಸಿದ್ದೀರಾ? ಎಂದು ಬಿಎಂಟಿಸಿ ಪರ ವಕೀಲರನ್ನು ಪ್ರಶ್ನಿಸಿತು.

ಅಲ್ಲದೆ, ಕಾರ್ಮಿಕರು ಸರಕು ವಾಹನಗಳಲ್ಲಿ ಪ್ರಯಾಣ ಮಾಡುತ್ತಿರುವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ನ್ಯಾಯಪೀಠ ಚಾಟಿ ಬೀಸಿತು. ನಂತರ ಅರ್ಜಿ ಕುರಿತು ಮೂರು ವಾರಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕಾರ್ಮಿಕ ಇಲಾಖೆ, ಕೆಎಸ್‌ಆರ್‌ಟಿಸಿ, ಎನ್‌ಇಕೆಆರ್‌ಟಿಸಿ, ಎನ್‌ ಡಬ್ಲೂಕೆಆರ್‌ ಟಿಸಿ ಮತ್ತು ಬಿಎಂಟಿಸಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next