Advertisement

ರಾಜ್ಯ ಸರ್ಕಾರ, ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌

11:38 AM Nov 16, 2018 | Team Udayavani |

ಬೆಂಗಳೂರು: ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಂಡಿರುವ ಕಾರಣಕ್ಕೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಗರದ 27 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳನ್ನು ಮುಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪೊಲೀಸರಿಗೆ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿಗೊಳಿಸಿದೆ. 

Advertisement

ಸಿಸಿಬಿ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೊಟೇಲ್ಸ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್ಸ್‌ ಓನರ್ ಅಸೋಸಿಯೇಷನ್‌ ಆ್ಯಂಡ್‌ ವರ್ಕಿಂಗ್‌ ವುಮನ್‌ ವೆಲ್‌ಫೇರ್‌ ಅಸೋಸಿಯೇಷನ್‌ ಹಾಗೂ ನಗರದ ವಿವಿಧ 27 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಮಾಲೀಕರು ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನ್ಯಾ.ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿತು.

ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದ ನ್ಯಾಯಪೀಠ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿರುವ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ, ನಗರ ಪೊಲೀಸ್‌ ಆಯುಕ್ತರು ಸೇರಿದಂತೆ ನಗರದ ಪಶ್ಚಿಮ ಹಾಗೂ ಪೂರ್ವ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ), ಕೇಂದ್ರ ಅಪರಾಧ ವಿಭಾಗದ ಡಿಸಿಪಿ ಅವರಿಗೆ ನೋಟಿಸ್‌ ಜಾರಿಗೆ ಆದೇಶಿಸಿ ವಿಚಾರಣೆಯನ್ನು ನ.19ಕ್ಕೆ ಮುಂದೂಡಿತು.

ಕಳೆದ ಸೆ.28ರಂದು ದಾಳಿ ನಡೆಸಿದ ಸಿಸಿಬಿ ಪೊಲೀಸರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಂಡ ಕಾರಣಕ್ಕೆ ಅರ್ಜಿದಾರ 27 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳನ್ನು ಬಲವಂತವಾಗಿ ಮುಚ್ಚಿಸಿದರು. ಈ ಸಂಬಂಧ ಯಾವುದೇ ನೋಟಿಸ್‌ ಕೊಟ್ಟಿಲ್ಲ. ಕೆಲಸಕ್ಕೆ ಮಹಿಳೆಯನ್ನು ನೇಮಕ ಮಾಡಿಕೊಳ್ಳಬಾರದು ಎಂಬ ಸರ್ಕಾರದ ಯಾವುದೇ ಲಿಖೀತ ಆದೇಶವನ್ನೂ ತೋರಿಸಿಲ್ಲ.

ಸಿಸಿಬಿಯ ಈ ಕ್ರಮ ಕಾನೂನು ಬಾಹಿರವಾಗಿದ್ದು, ಸಂವಿಧಾನದತ್ತ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಕಾನೂನು ಬದ್ಧ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡದಂತೆ ಹಾಗೂ ಮಹಿಳೆಯರನ್ನು ಕೆಲಸದಿಂದ ತಡೆಯದಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

Advertisement

ಸಿಸಿಬಿ ಬಲವಂತವಾಗಿ ಮುಚ್ಚಿರುವ ಎಲ್ಲ 27 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಕರ್ನಾಟಕ ಅಬಕಾರಿ ಕಾಯ್ದೆ-1965ರ ಅನ್ವಯ ಅಧೀಕೃತ ಪರವಾನಿಗೆ ಹೊಂದಿವೆ. ಈ ಪೈಕಿ 26 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಸಿಎಲ್‌-9 ಹೊಂದಿದ್ದರೆ, ಒಂದು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಸಿಎಲ್‌-7 ಹೊಂದಿದೆ. ಅಲ್ಲದೇ ಇವರೆಲ್ಲರೂ ಕರ್ನಾಟಕ ಪೌರ ನಿಗಮ ಕಾಯ್ದೆ-1976ರ ಅನ್ವಯ ಬಿಬಿಎಂಪಿಯಿಂದ ವಾಣಿಜ್ಯ ಪರವಾನಿಗೆ ಪಡೆದುಕೊಂಡಿದ್ದಾರೆ.

ಅಲ್ಲದೇ ವಿವಿಧ ಪ್ರಾಧಿಕಾರಗಳಿಂದ ಅಗತ್ಯ ಪರವಾನಿಗೆ ಪಡೆದುಕೊಳ್ಳಲಾಗಿದೆ. ಸದ್ಯ ಈ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳನ್ನು ಮುಚ್ಚಲ್ಪಟ್ಟಿರುವುದರಿಂದ ಇಲ್ಲಿ ಕೆಲಸ ಮಾಡುವ ಸಾವಿರಕ್ಕೂ ಹೆಚ್ಚು ಮಹಿಳೆಯರ ಕುಟುಂಬಗಳು ಬೀದಿಪಾಲಾಗಿವೆ. ಜೊತೆಗೆ ಸಾವಿರಕ್ಕೂ ಪುರಷರು ಸಹ ಕೆಲಸವಿಲ್ಲದೇ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next