Advertisement

3 ತಿಂಗಳಲ್ಲಿ ಸೂಕ್ತ ಆದೇಶ: ರೈಲ್ವೆ ಇಲಾಖೆಗೆ ಹೈಕೋರ್ಟ್‌ ಸೂಚನೆ

06:45 AM Oct 14, 2017 | Team Udayavani |

ಬೆಂಗಳೂರು: ಬೆಂಗಳೂರಿನಿಂದ ಕಾರವಾರಕ್ಕೆ ಶ್ರವಣಬೆಳಗೊಳದ ಮೂಲಕ ಪ್ರತ್ಯೇಕ ರೈಲು ಓಡಿಸುವ ಪ್ರಸ್ತಾವನೆಗೆ 3 ತಿಂಗಳಲ್ಲಿ ಸೂಕ್ತ ಆದೇಶ ಹೊರಡಿಸುವಂತೆ ಹೈಕೋರ್ಟ್‌ ಶುಕ್ರವಾರ ರೈಲ್ವೆ ಮಂಡಳಿಗೆ ನಿರ್ದೇಶನ ನೀಡಿದೆ. 

Advertisement

ಹೊಸದಾಗಿ ನಿರ್ಮಾಣಗೊಂಡಿರುವ ಕುಣಿಗಲ್‌ ರೈಲು ಮಾರ್ಗಕ್ಕೆ ಬೆಂಗಳೂರು-ಕಾರವಾರ ನಡುವೆ ಪ್ರತಿದಿನ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲು ಮಾರ್ಗವನ್ನು ಬದಲಿಸಲು ನೈರುತ್ಯ ರೈಲ್ವೆ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಸಂಜಯ್‌ ರೇವಣಕರ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಹಾಸನ-ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ಮಾರ್ಗದಲ್ಲಿ ಘಟ್ಟಪ್ರದೇಶಗಳು ಹೆಚ್ಚಾಗಿದ್ದು, ಈ ಮಾರ್ಗವು ಉತ್ತಮ ಸಾಮರ್ಥ್ಯ ಹೊಂದಿಲ್ಲ. ಆದ್ದರಿಂದ ಬೆಂಗಳೂರು-ಕಾರವಾರ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲನ್ನು ಕುಣಿಗಲ್‌ ರೈಲು ಮಾರ್ಗಕ್ಕೆ ಬದಲಿಸಲು ಸಾಧ್ಯವಿಲ್ಲ. ಒಂದು ವೇಳೆ ಮಾರ್ಗ ಬದಲಿಸಿದ್ದೇ ಆದರೆ, ಮೈಸೂರು, ರಾಮನಗರ, ಮಂಡ್ಯ ಭಾಗದ ಜನರಿಗೆ ಮಂಗಳೂರು ರೈಲು ಸಂಪರ್ಕ ಕಷ್ಟವಾಗಲಿದೆ ಎಂದು ಅ.11ರಂದು ನೈರುತ್ಯ ರೈಲ್ವೆ ಮಂಡಳಿ ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿತ್ತು. ನ್ಯಾಯಾಲಯವು ಕೂಡ ಇದನ್ನು ಒಪ್ಪಿತ್ತು. ಆದರೂ ಅರ್ಜಿದಾರರ ಮನವಿಯನ್ನು ಮತ್ತೂಮ್ಮೆ ಪರಿಶೀಲಿಸಿ ನಿಲುವು ತಿಳಿಸುವಂತೆ ಸೂಚನೆ ನೀಡಿದ್ದ ಹೈಕೋರ್ಟ್‌, ವಿಚಾರಣೆ ಮುಂದೂಡಿತ್ತು. 

ಶುಕ್ರವಾರ ಪುನಃ ಅರ್ಜಿ ವಿಚಾರಣೆಗೆ ಬಂದಿದ್ದು, ಬೆಂಗಳೂರು-ಕಣ್ಣೂರು ನಡುವೆ ಪ್ರತಿನಿತ್ಯ ಸಂಚರಿಸುವ ರೈಲನ್ನು ಕುಣಿಗಲ್‌ ಮಾರ್ಗವಾಗಿ ವಾರಕ್ಕೆ ನಾಲ್ಕು ದಿನ ಓಡಿಸಲು ನೈರುತ್ಯ ರೈಲ್ವೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿ ಅ.11ರಂದು ಒಪ್ಪಿತ್ತು. ಈ ವಿಚಾರವನ್ನು ಶುಕ್ರವಾರ ವಿಚಾರಣೆ ವೇಳೆ ಹೈಕೋರ್ಟ್‌ ಗಮನಕ್ಕೆ ತರಲಾಯಿತು.

ಈ ಹಿನ್ನೆಲೆಯಲ್ಲಿ ಅರ್ಜಿದಾರರು ಕುಣಿಗಲ್‌ ಮಾರ್ಗವಾಗಿ ಬೆಂಗಳೂರು-ಮಂಗಳೂರುಗೆ ಪ್ರತ್ಯೇಕ ರೈಲು ಓಡಿಸುವ ವಿಚಾರದಲ್ಲಿ ಮಾರ್ಗ ನಕ್ಷೆಯೊಂದನ್ನು ಸಿದ್ಧಪಡಿಸಬೇಕು. ಅದರೊಂದಿಗೆ ಈ ವಿಚಾರದಲ್ಲಿ ಇಲ್ಲಿಯವರೆಗೂ ನಡೆದ ಎಲ್ಲ ಬೆಳವಣಿಗಳ ಮಾಹಿತಿ ಹಾಗೂ ದಾಖಲೆಗಳನ್ನು ರೈಲ್ವೆ ಮಂಡಳಿಗೆ ಮನವಿ ಪತ್ರ ಸಲ್ಲಿಸಬೇಕು. ರೈಲ್ವೆ ಮಂಡಳಿ ಆ ಮನವಿ ಸ್ವೀಕರಿಸಿ ಮೂರು ತಿಂಗಳಲ್ಲಿ ಅರ್ಜಿದಾರರ ಅಹವಾಲು ಆಲಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next