ಬೆಂಗಳೂರು: ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯ ವಿಚಾರಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಪಾಡುವಂತೆ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯನ್ಯಾ. ದಿನೇಶ್ ಮಹೇಶ್ವರಿ ಹಾಗೂ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ವಿಭಾಗೀಯ ಪೀಠ, ಈ ನಿರ್ದೇಶನ ನೀಡಿತು.
ಮೇಲ್ಮನವಿ ಅರ್ಜಿಗಳಿಗೆ ಸಂಬಂಧಿಸಿದಂತೆ ಕೂಲಂಕಷ ಅರ್ಜಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಪೀಠ, ಕೆಲವೊಂದು ಅರ್ಜಿಗಳ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳು ಸಭೆ ನಡೆಸಬಹುದು. ಆದರೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ನ್ಯಾಯಪೀಠ ತಿಳಿಸಿತು.
ಅರ್ಜಿದಾರರ ಪರ ಹಾಗೂ ಸರ್ಕಾರದ ಪರ ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಪಂಚಾಯತ್ ರಾಜ್ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಆಯಾ ಅರ್ಜಿಗೆ ಸಂಬಂಧಿಸಿದ ಉಪವಿಭಾಗಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಮಾ.14ಕ್ಕೆ ವಿಚಾರಣೆ ಮುಂದೂಡಿತು.
ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಕಾಯಿದೆ 49( 2) 2015ರ ತಿದ್ದುಪಡಿ ನಿಯಮದ ಸಿಂಧುತ್ವ ಪ್ರಶ್ನಿಸಿದ್ದ 60ಕ್ಕೂ ಹೆಚ್ಚು ರಿಟ್ ಅರ್ಜಿಗಳನ್ನು ಇತ್ಯರ್ಥಪಡಿಸಿದ್ದ ಏಕಸದಸ್ಯ ಪೀಠ, ಈಗಾಗಲೇ ಅವಿಶ್ವಾಸ ನಿರ್ಣಯ ಮಂಡನೆಯಾಗಿರುವ ಅರ್ಜಿಗಳಿಗೆ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿತ್ತು.