ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎನ್-95 ಮಾಸ್ಕ್ಗಳ ದರ ನಿಯಂತ್ರಣ ಹಾಗೂ ಅವುಗಳು ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಇದೇ ವೇಳೆ ಪರಿಸ್ಥಿತಿಯ ವಿಷಮತೆಯ ಹಿನ್ನೆಲೆಯಲ್ಲಿ “ಎನ್-91 ಮಾಸ್ಕ್ ದರ ನಿಗದಿಯನ್ನು ಮಾರುಕಟ್ಟೆ ವಿವೇಚನೆಗೆ ಬಿಟ್ಟಿರುವ ಹಾಗೂ ಎನ್-95 ಮಾಸ್ಕ್ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಕೈಬಿಟ್ಟಿರುವ’ ನಿರ್ಧಾರವನ್ನು ಮರುಪರಿಶೀಲಿಸಬಹುದಲ್ಲವೇ ಎಂದು ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಹೈಕೋರ್ಟ್ ಇದರ ಬಗ್ಗೆ ನಿಲುವು ತಿಳಿಸುವಂತೆ ಸೂಚಿಸಿದೆ.
ಕೋವಿಡ್ ನಿಯಂತ್ರಣ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್. ಓಕ್ ಹಾಗೂ ನ್ಯಾ. ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಎನ್ -95 ಮಾಸ್ಕ್ಗಳ ದರ ಕನಿಷ್ಠ 60 ರಿಂದ ಗರಿಷ್ಠ ರೂ. 300 ರೂ.ವರೆಗೆ ಇದೆ ಎಂಬ ಅಂಶವನ್ನು ಗಮನಿಸಿದ ನ್ಯಾಯಪೀಠ, ಬೆಲೆಯಲ್ಲಿ ಇಷ್ಟೊಂದು ವ್ಯತ್ಯಾಸ ಹೇಗೆ ಎಂದು ಪ್ರಶ್ನಿಸಿತು. ಅಲ್ಲದೇ ಇತ್ತಿಚಿನ ದಿನಗಳಲ್ಲಿ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ವೈರಸ್‌ನಿಂದ ರಕ್ಷಣೆ ಪಡೆದುಕೊಳ್ಳಲು ಎನ್-95 ಮಾಸ್ಕ್ ಸುರಕ್ಷಿತ ಸಾಧನ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಿರುವಾಗ ಎನ್-95 ಮಾಸ್ಕ್ ಗಳು ಕೈಗೆಟಕುವ ದರದಲ್ಲಿ ಜನಸಾಮಾನ್ಯರಿಗೆ ಸಮರ್ಪಕ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುವುದು ಸರ್ಕಾರಗಳ ಜವಾಬ್ದಾರಿ ಎಂದು ಪೀಠ ತಿಳಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲಿದೆ ಮತ್ತು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಸೂಕ್ತ ಕ್ರಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿತು.
ಗುಣಮುಖ ಪ್ರಮಾಣದಲ್ಲಿ ಇಳಿಕೆ : ಬೆಂಗಳೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಎರಡು ಸಾವಿರದ ಮೇಲೆಯೆ ಇದ್ದ “ಕೋವಿಡ್-19′ ನಿಂದ ಚೇತರಿಸಿ ಕೊಂಡು ಬಿಡುಗಡೆ ಆಗುತ್ತಿರುವವರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ಕೆಲವು ದಿನಗಳಲ್ಲಿ ಮೂವತ್ತರ ಮೇಲೆಯೆ ಸಾಗುತ್ತಿದ್ದ ಕೋವಿಡ್ ಗೆ ಬಲಿಯಾಗುವವರ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಹೊಸದಾಗಿ 25 ಮಂದಿ ಕೋವಿಡ್ ಸೋಂಕಿನಿಂದ ಬಲಿಯಾಗಿದ್ದು ಇದರಲ್ಲಿ ಇಪ್ಪತ್ತೈದು ವರ್ಷದ ಯುವಕ ಕೂಡ ಸೇರಿದ್ದಾನೆ. ಈವರೆಗೂ ಕೋವಿಡ್ ಸೋಂಕಿಗೆ ಒಟ್ಟು 2,091 ಮಂದಿ ಬಲಿಯಾಗಿದ್ದಾರೆ. ಶುಕ್ರವಾರ 1,732 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಈ ಮೂಲಕ ಕೋವಿಡ್‌ನಿಂದ ಚೇತರಿಸಿ ಕೊಂಡು ವಿವಿಧ ಆಸ್ಪತ್ರೆ ಮತ್ತು ಆರೈಕೆ ಕೇಂದ್ರಗಳಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆ 97,926ಕ್ಕೆ ಏರಿದೆ. ಹಾಗೆಯೇ ಹೊಸದಾಗಿ 2,963 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ ಈಗ 1,41,664ಕ್ಕೆ ಏರಿಕೆ ಆಗಿದೆ. ಇದರ ಜತೆಗೆ 41, 646 ಸಕ್ರಿಯ ಪ್ರಕರಣಗಳು ನಗರದಲ್ಲಿದ್ದು, ಅವರೆಲ್ಲ ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರಕ್ಕೆ ದಾಖಲಾಗಿ ಆರೈಕೆ ಪಡೆಯುತ್ತಿದ್ದಾರೆ. ಅಲ್ಲದೆ 276 ಮಂದಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.