Advertisement

ಅತ್ಯಾಚಾರ: ಸಂತ್ರಸ್ತೆ ಪ್ರಾಯ ನಿರ್ಧಾರಕ್ಕೆ ಶಾಲಾ ದಾಖಲಾತಿ ಪ್ರಾಮುಖ್ಯ ಹೆಚ್ಚು

10:40 PM Nov 07, 2022 | Team Udayavani |

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯು ಅಪ್ರಾಪ್ತ ವಯಸ್ಕಳು ಎಂದು ನಿರ್ಧರಿಸುವ ವಿಚಾರದಲ್ಲಿ ವೈದ್ಯರು ನೀಡಿದ ವೈದ್ಯಕೀಯ ಅಭಿಪ್ರಾಯಕ್ಕಿಂತ ಶಾಲಾ ಪ್ರಾಧಿಕಾರಗಳು ವಿತರಿಸಿದ ಪ್ರಮಾಣ ಪತ್ರ ಹೆಚ್ಚು ಪ್ರಾಮುಖ್ಯ ಹೊಂದಿರುತ್ತದೆ ಎಂದು ಹೈಕೋರ್ಟ್‌ ಹೇಳಿದೆ.

Advertisement

ಹದಿನೈದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಲಬುರಗಿ ಜಿಲ್ಲೆಯ ನಿವಾಸಿ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸರಕಾರ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ| ಎಚ್‌.ಬಿ. ಪ್ರಭಾಕರ ಶಾಸ್ತ್ರಿ ನೇತೃತ್ವದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೆ ಆರೋಪಿಯನ್ನು ಖುಲಾಸೆಗೊಳಿಸಿ ವಿಚಾರಣ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಪಡಿಸಿದ ಹೈಕೋರ್ಟ್‌, ಏಳು ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಘಟನೆ ಸಂದರ್ಭ ಸಂತ್ರಸ್ತೆ ವಯಸ್ಕಳಾಗಿದ್ದಳು ಎಂದು ವೈದ್ಯರು ದೃಢೀಕರಿಸಿದ್ದರು ಎಂಬ ಆರೋಪಿಯ ವಾದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಪೀಠ, ಮೆಟ್ರಿಕ್ಯುಲೇಷನ್‌ ಅಥವಾ ಅದಕ್ಕೆ ಸಮಾನವಾದ ಪ್ರಮಾಣ ಪತ್ರ ಅಥವಾ ಶಾಲೆ, ನಗರ ಪಾಲಿಕೆ, ಪೌರಾಡಳಿತ ಪ್ರಾಧಿಕಾರ ಅಥವಾ ಪಂಚಾಯತ್‌ ನೀಡುವ ಜನನ ಪ್ರಮಾಣ ಪತ್ರ ಲಭ್ಯವಿಲ್ಲದ ಸಂದರ್ಭದಲ್ಲಿ ಸಂತ್ರಸ್ತೆ ಮಕ್ಕಳ ವಯಸ್ಸು ನಿರ್ಧರಿಸಲು ವೈದ್ಯಕೀಯ ಅಭಿಪ್ರಾಯ ಕೋರಲಾಗುತ್ತದೆ ಎಂದು ತಿಳಿಸಿದೆ.

ಏನಿದು ಪ್ರಕರಣ?: ವಿವಾಹಿತ ವ್ಯಕ್ತಿಯೊಬ್ಬ ತನ್ನದೇ ಗ್ರಾಮದ ಅಪ್ರಾಪ್ತೆಯೊಂದಿಗೆ ಹಲವು ಬಾರಿ ಅತ್ಯಾಚಾರ ನಡೆಸಿದ್ದ ಹಾಗೂ ಘಟನೆ ಬಹಿರಂಗ ಪಡಿಸದಂತೆ ಬೆದರಿಕೆ ಹಾಕಿದ್ದ. ಸಂತ್ರಸ್ತೆ ಗರ್ಭಿಣಿಯಾದಾಗ ಘಟನೆ ಬಹಿರಂಗವಾಗಿತ್ತು. ಇದರಿಂದ ಸಂತ್ರಸ್ತೆ ಪೋಷಕರು ಅತ್ಯಾಚಾರ, ಬೆದರಿಕೆ ಮತ್ತು ಮನೆ ಅತಿಕ್ರಮ ಪ್ರವೇಶ ಆರೋಪ ಸಂಬಂಧ ದೂರು ದಾಖಲಿಸಿದ್ದರು. ಸ್ಥಳೀಯ ಪೋಕ್ಸೊ  ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿತ್ತು. ಈ ಆದೇಶ ರದ್ದು ಕೋರಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

Advertisement

ಆರೋಪಿ ಪರ ವಕೀಲರು, ಆರೋಪಿಯು ಸಂತ್ರಸ್ತೆಯ ಸಮ್ಮತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಘಟನೆ ನಡೆದಾಗ ಸಂತ್ರಸ್ತೆ ವಯಸ್ಕಳಾಗಿದ್ದಳು. ಇನ್ನೂ ತನ್ನ ವಯಸ್ಸು 19 ವರ್ಷ ಎಂದು ಸಂತ್ರಸ್ತೆ ಹೇಳಿಕೆ ನೀಡಿರುವುದಾಗಿ ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆ ನಡೆಸಿರುವ ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿಸಿದ್ದರು.

ಸರ್ಕಾರಿ ಅಭಿಯೋಜಕರು, ಘಟನೆ ನಡೆದಾಗ ಸಂತ್ರಸ್ತೆಯು ಅಪ್ರಾಪ್ತಳಾಗಿದ್ದಳು. ಸಂತ್ರಸ್ತೆ ಸಮ್ಮತಿ ನೀಡಿದ್ದರೆ, ಅದು ಕಾನೂನಿನಡಿ ಮಾನ್ಯವಾಗುವುದಿಲ್ಲ ಎಂದು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next