Advertisement

ದಿವ್ಯಾ ಹಾಗರಗಿ ಯಾವ ಸಾಮಾಜಿಕ ಕಾರ್ಯ ನಡೆಸಿ ಜೈಲಿಗೆ ಹೋಗಿದ್ದಾರೆ: ಹೈಕೋರ್ಟ್‌

10:04 PM Jul 18, 2022 | Team Udayavani |

ಬೆಂಗಳೂರು: ಪಿಎಸ್‌ಐ ನೇಮಕ ಅಕ್ರಮ ಪ್ರಕರಣದಲ್ಲಿ ಬಂಧನದಲ್ಲಿರುವ ದಿವ್ಯಾ ಹಾಗರಗಿ ಯಾವ ಸಾಮಾಜಿಕ ಹೋರಾಟ ನಡೆಸಿ ಜೈಲಿಗೆ ಹೋಗಿದ್ದಾರೆ ಎಂದು ಹೈಕೋರ್ಟ್‌ ತೀಕ್ಷ್ಣವಾಗಿ ಪ್ರಶ್ನಿಸಿದೆ.

Advertisement

ನರ್ಸಿಂಗ್‌ ಮಂಡಳಿ ಕಾರ್ಯವೈಖರಿ ಪ್ರಶ್ನಿಸಿ ದಿವ್ಯಾ ಹಾಗರಗಿ 2020 ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಆಗ ಅರ್ಜಿದಾರರ ಪರ ವಕೀಲರು, ತಮ್ಮ ಕಕ್ಷಿದಾರರು ಜೈಲಿನಲ್ಲಿದ್ದಾರೆ. ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಹಾಗಾಗಿ ಸ್ವಲ್ಪ ಸಮಯಾವಕಾಶ ಬೇಕು ಎಂದು ಕೋರಿದರು.

ಆಗ ನ್ಯಾಯಪೀಠ, ಯಾವ ಕಾರಣಕ್ಕಾಗಿ ದಿವ್ಯಾ ಹಾಗರಗಿ ಜೈಲಿನಲ್ಲಿದ್ದಾರೆ? ಯಾವ ಸಾರ್ವಜನಿಕ ಹೋರಾಟ ನಡೆಸಿ ಜೈಲಿನಲ್ಲಿದ್ದಾರೆ? ತಮ್ಮ ಸಾಮಾಜಿಕ ಕಾರ್ಯದಿಂದಾಗಿಯೇ ಜೈಲಿನಲ್ಲಿದ್ದಾರೆಯೇ ಎಂದು ದಿವ್ಯಾ ಪರ ವಕೀಲರನ್ನು ಪ್ರಶ್ನಿಸಿತು.

ಅಲ್ಲದೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು ಜೈಲಿನಲ್ಲಿರುವುದು ಕುತೂಹಲಕರ ವಿಚಾರ. ಹಾಗಾಗಿ ಜೈಲಿಗೆ ಹಾಕಿರುವ ಕಾರಣವೇನು ತಿಳಿದುಕೊಂಡು ಹೇಳಿ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿಯವರು ದಿವ್ಯಾ ಹಾಗರಗಿ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಒಂದು ವಾರ ಮುಂದೂಡಿತು.

Advertisement

ದಿವ್ಯಾ ಹಾಗರಗಿ 2020ರ ನವೆಂಬರ್‌ ನಲ್ಲಿ ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ನರ್ಸಿಂಗ್‌ ಮಂಡಳಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮತ್ತು ಕರ್ನಾಟಕ ನರ್ಸಿಂಗ್‌ ಮತ್ತು ಅರೆವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಪ್ರಾಧಿಕಾರದ ವಿಶೇಷಾಕಾರಿ ಡಾ.ಎನ್‌.ರಾಮಕೃಷ್ಣಾರೆಡ್ಡಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಅರ್ಜಿ ಸಲ್ಲಿಸಿದ್ದರು. ಆದರೆ ಏಕಸದಸ್ಯ ನ್ಯಾಯಪೀಠ, ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರುವುದರಿಂದ ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸುವಂತೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ವರ್ಗಾಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next