Advertisement

ಸಶಕ್ತ ವ್ಯಕ್ತಿ ಪತ್ನಿಯಿಂದ ಜೀವನಾಂಶ ಕೇಳುವಂತಿಲ್ಲ: ಉಡುಪಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಜಾ

12:27 AM Jul 13, 2022 | Team Udayavani |

ಬೆಂಗಳೂರು: ಸಂಪಾದನೆ ಸಾಮರ್ಥ್ಯ ಇರುವ ಸಶಕ್ತ ವ್ಯಕ್ತಿಯು ತನ್ನ ಪತ್ನಿಯಿಂದ ಶಾಶ್ವತ ಜೀವನಾಂಶ ಕೇಳಲು ಅವಕಾಶ ಇಲ್ಲ ಎಂದು ಹೈಕೋರ್ಟ್‌ ತಿಳಿಸಿದೆ.

Advertisement

ಉಡುಪಿಯ ಬಡಾ ನಿಡಿಯೂರು ಗ್ರಾಮದ ವ್ಯಕ್ತಿಯೊಬ್ಬರು ಹಿಂದೂ ವಿವಾಹ ಕಾಯ್ದೆ ಸೆಕ್ಷನ್‌ 25ರ ಅಡಿ ಪತ್ನಿಯಿಂದ ಜೀವನಾಂಶ ಕೋರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಹಾಗೂ ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಪೀಠ ಮಂಗಳವಾರ ಈ ಆದೇಶ ನೀಡಿದೆ.

ಶಾಶ್ವತ ಜೀವನಾಂಶ ಕೋರಿ ಅರ್ಜಿ ಸಲ್ಲಿಕೆಯಾದಾಗ ಎರಡೂ ಕಡೆಯವರ ಸ್ಥಿತಿಗತಿ, ಸತಿ ಅಥವಾ ಪತಿಯ ಅಗತ್ಯತೆ ಹಾಗೂ ಜೀವನಾಂಶ ಕೋರಿದವರ ಆದಾಯ ಮತ್ತು ಆಸ್ತಿ ಪರಿಗಣಿಸಬೇಕಾಗುತ್ತದೆ. ಪಿತ್ರಾ ರ್ಜಿತ ಜಮೀನು ಹಾಗೂ ಸದ್ಯ ವಾಸವಿರುವ ಮನೆಯಲ್ಲಿ ತಾವು ಪಾಲು ಹೊಂದಿರುವುದಾಗಿ ಮೇಲ್ಮನವಿದಾರರೇ ಒಪ್ಪಿಕೊಂಡಿದ್ದಾರೆ. ಆದರೆ, ಸಹಕಾರ ಸಂಘವೊಂದರಲ್ಲಿ ನೌಕರಿ ಮಾಡುತ್ತಿರುವ ಮಹಿಳೆ ತಮ್ಮ 15 ವರ್ಷದ ಮಗನನ್ನೂ ನೋಡಿಕೊಳ್ಳುತ್ತಿದ್ದಾರೆ. ಮಗನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಹಣದ ಹೊರೆ ಇದೆ.

ಮೇಲ್ಮನವಿದಾರರು ಸಾಮರ್ಥ್ಯವಿರುವ ಸಶಕ್ತ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಶಾಶ್ವತ ಜೀವನಾಂಶ ನಿರಾಕರಿಸಿರುವ ಕೌಟುಂಬಿಕ ನ್ಯಾಯಾಲಯದ ಕ್ರಮ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟು ಮೇಲ್ಮನವಿ ವಜಾಗೊಳಿಸಿತು.
ಇದಕ್ಕೂ ಮುನ್ನ ಮೇಲ್ಮನವಿದಾರರ ಪರ ವಕೀಲರು, ಪ್ರತಿವಾದಿ ಮಹಿಳೆ ಸಹಕಾರ ಸಂಘವೊಂದರಲ್ಲಿ ಸಹಾ ಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನವೊಂದರಲ್ಲಿ ಭದ್ರತ ಸಿಬಂದಿಯಾಗಿದ್ದ ಮೇಲ್ಮನವಿದಾರರು ಈಗ ಕೆಲಸ ಕಳೆದುಕೊಂಡಿದ್ದು, ಜೀವನ ನಿರ್ವಹಣೆಗೆ ಆದಾಯವಿಲ್ಲದಂತಾಗಿದೆ ಎಂದು ವಾದ ಮಂಡಿಸಿದ್ದರು.

ಮಹಿಳೆ ಪರ ವಕೀಲರು, ಮಹಿಳೆಯು ಮಾಸಿಕ 8,000 ರೂ. ವೇತನ ಪಡೆಯುತ್ತಿದ್ದು, ತಮ್ಮ ಮಗನನ್ನೂ ಆ ಹಣದಲ್ಲೇ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

Advertisement

ಪ್ರಕರಣದ ಹಿನ್ನೆಲೆ
ದಂಪತಿ 1993ರ ಮಾ. 25ರಂದು ಮದುವೆಯಾಗಿದ್ದರು. ಗರ್ಭವತಿಯಾಗಿದ್ದ ಪತ್ನಿ ಮಗುವಿಗೆ ಜನ್ಮ ನೀಡುವ ಮೊದಲೇ 1994ರ ಫೆಬ್ರವರಿಯಲ್ಲಿ ಪತಿಯ ಮನೆ ತೊರೆದಿದ್ದರು. ಮಗು ಹುಟ್ಟಿದ ಅನಂತರ ಹಲವು ವರ್ಷಗಳೇ ಕಳೆದರೂ ಆಕೆ ಗಂಡನ ಮನೆಗೆ ತೆರಳಿರಲಿಲ್ಲ. ಇದರಿಂದ, ವಿವಾಹ ವಿಚ್ಛೇದನ ಹಾಗೂ ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಪತಿ ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ, ದಂಪತಿಗೆ ವಿಚ್ಛೇದನ ನೀಡಿ 2015ರ ಆ. 19ರಂದು ಆದೇಶಿಸಿತ್ತು. ಆದರೂ, ಶಾಶ್ವತ ಜೀವನಾಂಶದ ಮನವಿಯನ್ನು ಮಾನ್ಯ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next