ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆಯ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಅಭಿ ಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಮರ ಮುಂದುವರಿದಿದ್ದು, ರಾಜ್ಯ ಪಾಲರ ಕ್ರಮವನ್ನು ಪ್ರಶ್ನಿಸಿ ಮುಖ್ಯಮಂತ್ರಿಯವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ ಮುಂದುವರಿಸಲಿದೆ.
ನ್ಯಾ| ಎಂ. ನಾಗಪ್ರಸನ್ನ ಅವರಿರುವ ಏಕ ಸದಸ್ಯ ನ್ಯಾಯಪೀಠ ಅಪರಾಹ್ನ 2.30ರಿಂದ ವಿಚಾರಣೆ ಮುಂದುವರಿಸಲಿದೆ. ಇದು ನಾಲ್ಕನೇ ದಿನದ ವಿಚಾರಣೆ ಆಗಲಿದೆ. ಆ. 19, 29, 31ರಂದು ವಿಚಾರಣೆ ನಡೆದಿದ್ದು, ಸೋಮವಾರ ಮುಂದುವರಿಯಲಿದೆ. ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ. ರಾಘವನ್ ವಾದ ಮಂಡಿಸುವ ಸಾಧ್ಯತೆಯಿದೆ. ಇದೇ ವೇಳೆ ವಕೀಲೆ ಲಕ್ಷ್ಮೀ ಅಯ್ಯಂಗಾರ್ ಕೂಡ ದೂರುದಾರರ ಪರ ವಾದ ಮಂಡಿಸುವುದಾಗಿ ಹೇಳಿದ್ದಾರೆ.
ಮೊದಲ ಎರಡು ದಿನ ಸಿಎಂ ಪರ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಿರಿಯ ವಕೀಲ ಪ್ರೊ| ರವಿವರ್ಮ ಕುಮಾರ್ ಪ್ರಾಥಮಿಕ ವಾದ ಮಂಡಿಸಿದ್ದಾರೆ. ಶನಿವಾರ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರರಾದ ಸ್ನೇಹಮಯಿ ಕೃಷ್ಣ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮಣೀಂದರ್ ಸಿಂಗ್, ಕೆ.ಎಸ್. ಪ್ರದೀಪ್ ಪರ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ, ಟಿ.ಜೆ. ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ತಮ್ಮ ಪ್ರಾಥಮಿಕ ವಾದಗಳನ್ನು ಪೂರ್ಣಗೊಳಿಸಿದ್ದಾರೆ.
ಸೋಮವಾರ ಕೆ.ಜಿ. ರಾಘವನ್, ಲಕ್ಷ್ಮೀ ಅಯ್ಯಂಗಾರ್ ವಾದ ಮುಗಿಸಿದ ಬಳಿಕ ಸಮಯ ಉಳಿದರೆ ಅಭಿಷೇಕ್ ಮನು ಸಿಂಘ್ವಿ ಮರು ವಾದ ಮಂಡಿಸುವ ಸಾಧ್ಯತೆಯಿದೆ. ಆ ಬಳಿಕ ರಾಜ್ಯ ಸರಕಾರ(ಮುಡಾ)ದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ವಾದ ಮಂಡಿಸಲಿದ್ದಾರೆ.
ಒಂದು ವೇಳೆ ಸೋಮವಾರ ವಾದ ಮಂಡನೆ ಅಪೂರ್ಣಗೊಂಡರೆ ವಿಚಾರಣೆ ಸಹಜವಾಗಿ ಮುಂದೂಡಿಕೆಯಾಗಲಿದೆ. ಆಗ ಪ್ರಕರಣದ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಾ ಗಿರುವ ಖಾಸಗಿ ದೂರುಗಳಿಗೆ ಸಂಬಂಧಿಸಿದ ಆದೇಶ ಅಥವಾ ವಿಚಾರಣ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಮತ್ತು ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವ ಆದೇಶವನ್ನು ಆಧರಿಸಿ ಸಿಎಂ ವಿರುದ್ಧ ಈ ಹಂತದಲ್ಲಿ ಬಲವಂತದ ಅಥವಾ ಆತುರದ ಕ್ರಮ ಜರುಗಿಸುವಂತಿಲ್ಲ ಎಂದು ಹೈಕೋರ್ಟ್ ಆ. 19ರಂದು ನೀಡಿರುವ ಮಧ್ಯಾಂತರ ಆದೇಶವೂ ಮುಂದುವರಿಯಲಿದೆ.
ಇಂದಿನಿಂದ ಸಿಎಂ
ಮೈಸೂರು ಪ್ರವಾಸ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ. 2 ರಿಂದ ಎರಡು ದಿನಗಳ ಕಾಲ ಮೈಸೂರು ಪ್ರವಾಸ ಮಾಡಲಿದ್ದಾರೆ. ಸೆ. 2ರಂದು ಆಗಮಿಸಲಿರುವ ಅವರು ಸೆ. 3ರಂದು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.