Advertisement

High court: ಮರ ಬೆಳೆಸುವ ಉದ್ದೇಶಕ್ಕೆ ಜಮೀನು ನೀಡಿದರೆ ಮಾಲೀಕತ್ವ ನೀಡಿದಂತಲ್ಲ: ಹೈ

11:54 AM Jan 21, 2024 | Team Udayavani |

ಬೆಂಗಳೂರು: ಮರ ಬೆಳೆಸುವ ಉದ್ದೇಶಕ್ಕೆ ಸರ್ಕಾರ ಜಮೀನು ಗ್ರ್ಯಾಂಟ್‌ ಮಾಡಿದ್ದರೆ ಆ ಜಮೀನಿನ ಮಾಲಿಕತ್ವ ವನ್ನೇ ನೀಡಲಾಗಿದೆ ಎಂದು ಭಾವಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್‌ ಹೇಳಿದೆ.

Advertisement

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾ.ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ನ್ಯಾಯಪೀಠ, ಸಾಮಾನ್ಯವಾಗಿ ದತ್ತಿ ನೀಡಿದ ಜಮೀನಿನ ಮಾಲೀಕತ್ವವು ಜಮೀನು ಪಡೆದವನದ್ದಾಗಿರುತ್ತದೆ. ಒಂದು ವೇಳೆ ಷರತ್ತು ಬದ್ಧವಾಗಿ ದತ್ತಿ ನೀಡಿದ್ದರೆ ಆ ಷರತ್ತಿನ ಪಾಲನೆ ಆಗದಿದ್ದ ಸಂದರ್ಭದಲ್ಲಿ ಮಾಲೀಕತ್ವವು ದತ್ತಿ ನೀಡಿದಾತನ ಪಾಲಾಗುತ್ತದೆ. ಮರ ಬೆಳೆಸುವುದಕ್ಕಾಗಿ ಜಮೀನು ದತ್ತಿ ನೀಡಿದ್ದರೆ ಆ ಜಮೀನಿನಲ್ಲಿರುವ ಮರಗಳ ಮಾಲೀಕತ್ವ ದತ್ತಿ ಪಡೆದವನಿಗೆ ಸೇರುತ್ತದೆಯೇ ಹೊರತು, ಜಮೀನಲ್ಲ ಎಂದು ಆದೇಶ ನೀಡಿದೆ.

ದತ್ತಿ ನೀಡಿದ ಜಮೀನಿನಲ್ಲಿ ಬೆಳೆದ ಮರಗಳ ಸಂಪೂರ್ಣ ಮಾಲೀಕತ್ವ ದತ್ತಿಪಡೆದಾತನಿಗೆ ಸೇರಿರುತ್ತದೆ. ಆದ್ದರಿಂದ ಆ ಮರಗಳಿಗೆ ಪರಿಹಾರ ಪಡೆಯಲು ದತ್ತಿ ಪಡೆದವರು ಅರ್ಹರಾಗಿರುತ್ತಾರೆ.ಒಂದು ವೇಳೆ ಆ ಜಮೀನಿನಲ್ಲಿ ಬೆಳೆದ ಮರವನ್ನು ತೆಗೆದಿದ್ದರೆ ಅಥವಾ ತೆಗೆಯಲು ಅವಕಾಶ ನೀಡಿದ್ದಾರೆ ಆಗ ಪರಿಹಾರ ನೀಡುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ತುಮಕೂರಿನ ಯಲದಡ್ಲು ಗ್ರಾಮದಲ್ಲಿ ನಂಜುಂಡಪ್ಪ ಮತ್ತು ಇತರರ ಪೂರ್ವಜರಿಗೆ ಮರ ಬೆಳೆಸಲು ನೀಡಲಾಗಿದ್ದ ಜಮೀನನ್ನು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಜಮೀನಿಗೆ ಪರಿಹಾರ ನೀಡದೆ ಸ್ವಾಧೀನಕ್ಕೆ ಮುಂದಾಗಿತ್ತು. ಈ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next