ಬೆಂಗಳೂರು: ಕ್ಷಿಪ್ರಗತಿಯಲ್ಲಿ ಅರ್ಜಿಗಳ ವಿಲೇವಾರಿಗೆ ಹೆಸರಾಗಿರುವ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಂಗಳವಾರದ ದಿನದ ಕಲಾಪ ದಲ್ಲಿ 503 ಅರ್ಜಿಗಳ ವಿಚಾರಣೆ ನಡೆಸಿದ್ದಾರೆ.
ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದ ಕೋರ್ಟ್ ಹಾಲ್‌ನಲ್ಲಿ 17ರಲ್ಲಿ ಕಲಾಪ ನಡೆಸುತ್ತಿರುವ ನ್ಯಾ| ನಾಗಪ್ರಸನ್ನ ಅವರು ಕ್ರಿಮಿನಲ್ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗ್ಗೆ 10.30ರ ವೇಳೆಗೆ ವಿಚಾರಣೆ ಆರಂಭಿಸಿದ ನ್ಯಾಯ ಮೂರ್ತಿಗಳು ದಿನದ ಕಲಾಪದ ಅವಧಿ ಮುಕ್ತಾಯಗೊಳ್ಳುವ 45 ನಿಮಿಷಗಳ ಮುಂಚಿತವಾಗಿ ಎಲ್ಲ 503 ಅರ್ಜಿಗಳ ವಿಚಾರಣೆಯನ್ನು ಮುಕ್ತಾಯ ಗೊಳಿಸಿದರು.
ಈ ಪೈಕಿ 187 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, 125 ಪ್ರಕರಣಗಳಲ್ಲಿ ಮಧ್ಯಂತರ ಆದೇಶ ನೀಡಲಾಗಿದೆ. ಉಳಿದ ಪ್ರಕರಣಗಳಲ್ಲಿ ವಿಚಾರಣೆ ಮುಂದೂಡಲಾಗಿದೆ.
ನ್ಯಾ| ನಾಗಪ್ರಸನ್ನ ಅವರು ಈ ಹಿಂದೆ ಒಂದೇ ದಿನದ ಕಲಾಪದಲ್ಲಿ 600ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿದ್ದ ಹೆಗ್ಗಳಿಕೆ ತೋರಿಸಿದ್ದರು.
ನ್ಯಾ| ನಾಗಪ್ರಸನ್ನ ಅವರು 2019ರ ನವೆಂಬರ್ 26ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2021ರ ಸೆಪ್ಟಂಬರ್ 8ರಂದು ಖಾಯಂಗೊಂಡಿದ್ದಾರೆ. 2033ರ ಮಾರ್ಚ್ ವೇಳೆಗೆ ನಿವೃತ್ತರಾಗಲಿದ್ದಾರೆ.