Advertisement

ಸಿಇಟಿ ಫ‌ಲಿತಾಂಶ ಗೊಂದಲ: ವಿಚಾರಣೆ

11:15 PM Aug 04, 2022 | Team Udayavani |

ಬೆಂಗಳೂರು: ಸಿಇಟಿ ಫಲಿತಾಂಶಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕಗಳನ್ನು ಪರಿಗಣಿಸ ದಿರುವ ಸರಕಾರದ ನಿರ್ಧಾರ ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸುವುದಾಗಿ ಹೈಕೋರ್ಟ್‌ ಹೇಳಿದೆ.

Advertisement

ಈ ವಿಚಾರವಾಗಿ ವಿದ್ಯಾರ್ಥಿನಿ ಜಿ. ಮನಸ್ವಿನಿ ಸೇರಿ ಏಳು ಮಂದಿ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಗುರುವಾರ ನ್ಯಾ| ಎಸ್‌.ಆರ್‌. ಕೃಷ್ಣಕುಮಾರ್‌ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿಗಳು, ಸೋಮವಾರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಾಗಿ ಹೇಳಿದರು.

ಅರ್ಜಿದಾರರ ಪರ ವಾದಿಸಿದ ವಕೀಲ ಶತಬೀಶ್‌ ಶಿವಣ್ಣ, ಈ ಬಾರಿಯ ಸಿಇಟಿ ಪರೀಕ್ಷಾ ಫಲಿತಾಂಶಕ್ಕೆ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಅಂಕವನ್ನು ಪರಿಗಣಿಸಿಲ್ಲ. ಈ ಸಂಬಂಧ ಜು. 30ರಂದು ಸರಕಾರ ಹೊರಡಿಸಿರುವ ಆದೇಶ ಕಾನೂನು ಬಾಹಿರ, ಏಕಪಕ್ಷೀಯವಾಗಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಕೋರಿದರು. ಕರ್ನಾಟಕ ಸಿಇಟಿಯ ರ್‍ಯಾಂಕ್‌ಗೆ ಪುನರಾವರ್ತಿತ ಅಭ್ಯರ್ಥಿಗಳ ಪಿಯುಸಿ ಅಂಕಗಳನ್ನು ಪರಿಗಣಸದೆ ಇರುವುದು ಸಿಇಟಿ ಪ್ರವೇಶ ನಿಯಮಗಳ ಉಲ್ಲಂಘನೆಯಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ದೊಡ್ಡ ನಷ್ಟವಾಗಿದೆ, ಅವರ ಭವಿಷ್ಯದ ಮೇಲೂ ಪರಿಣಾಮವಾಗುತ್ತಿದೆ ಎಂದು ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.

ರದ್ದಾಗಿದ್ದ ಲಂಚ ಪ್ರಕರಣ  ಮರು ವಿಚಾರಣೆಗೆ “ಹೈ’ ಸೂಚನೆ:

ಬೆಂಗಳೂರು: ಜಯನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ 2005ರಲ್ಲಿ ನಡೆದಿದ್ದ ಲಂಚ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಬ್‌ ರಿಜಿಸ್ಟ್ರಾರ್‌ ಸೇರಿದಂತೆ ನಾಲ್ವರ ವಿರುದ್ಧದ ವಿಚಾರಣೆಯನ್ನು ಮರು ಆರಂಭಿಸಲು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

Advertisement

ಪ್ರಕರಣದ ಸಂಬಂಧ ಬೆಂಗಳೂರಿನ ಜಯನಗರದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ 2005ರ ಅವಧಿಯಲ್ಲಿ ಸಬ್‌ ರಿಜಿಸ್ಟ್ರಾರ್‌ಗಳಾಗಿದ್ದ‌ ವೆಂಕಟೇಶ್‌ ಭಟ್‌, ಕೆ.ಆರ್‌. ರೇಣುಕಾಪ್ರಸಾದ್‌, ಪ್ರಥಮ ದರ್ಜೆ ಸಹಾಯಕ ಎಲ್‌.ವಿ. ಷಡಕ್ಷರಿ ಮತ್ತು ಖಾಸಗಿ ವ್ಯಕ್ತಿ ಎಸ್‌. ನಟರಾಜ್‌ ವಿರುದ್ಧದ ವಿಚಾರಣ ಪ್ರಕ್ರಿಯೆ ರದ್ದುಪಡಿಸಿದ್ದ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮರುಪರಿಶೀಲನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ| ಎಚ್‌.ಬಿ. ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ವಾಣಿಜ್ಯ ಮಂಡಳಿ ಚುನಾವಣೆ: ಹೈಕೋರ್ಟ್‌ ಅಂಗಳಕ್ಕೆ :

ಬೆಂಗಳೂರು: ಸಿಬಂದಿಯ ವೇತನಕ್ಕೆ ಹಣ ಬಳಸುವುದನ್ನು ಬಿಟ್ಟು ಮತ್ತೆ ಬೇರೆ ಯಾವುದಕ್ಕೂ ಹಣ ಖರ್ಚು ಮಾಡಬಾರದು, ಜತೆಗೆ ಯಾವುದೇ ದೊಡ್ಡ ಸಮಾರಂಭ ನಡೆಸದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೈಕೋರ್ಟ್‌ ಮಧ್ಯಾಂತರ ನಿರ್ದೇಶನ ನೀಡಿದೆ.

ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಅವರ‌ ತಂಡ ಸಲ್ಲಿಸಿದ ತಕರಾರು ಅರ್ಜಿ ಪುರಸ್ಕರಿಸಿ ಈ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.